ADVERTISEMENT

ಟಿವಿಎಸ್ ಮುಖ್ಯಸ್ಥ ಶ್ರೀನಿವಾಸನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ತಮಿಳುನಾಡು ದೇಗುಲದ ವಿಗ್ರಹಗಳ ನಾಪತ್ತೆ ಪ್ರಕರಣ

ಪಿಟಿಐ
Published 29 ನವೆಂಬರ್ 2018, 20:15 IST
Last Updated 29 ನವೆಂಬರ್ 2018, 20:15 IST
ವೇಣು ಶ್ರೀನಿವಾಸನ್
ವೇಣು ಶ್ರೀನಿವಾಸನ್   

ಚೆನ್ನೈ: ಮೈಲಾಪುರದ ಪ್ರಸಿದ್ಧ ಕಪಾಲೀಶ್ವರರ್ ದೇಗುಲದ ಪುರಾತನ ವಿಗ್ರಹಗಳ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ಟಿವಿಎಸ್ ಮೋಟರ್ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಇನ್ನಿಬ್ಬರು ಶಂಕಿತರಾದ ತಮಿಳುನಾಡಿನ ಪ್ರಮುಖ ಶಿಲ್ಪಿ ಎಂ.ಮುತ್ತಯ್ಯ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಸಂರಕ್ಷಣಾ ಇಲಾಖೆಯ ಮಾಜಿ ಆಯುಕ್ತ ಪಿ.ಧನಪಾಲ್ ಅವರಿಗೂ ನಿರೀಕ್ಷಣಾ ಜಾಮೀನು ದೊರಕಿದೆ. ಆದರೆ, ಇಲಾಖೆಯ ಹೆಚ್ಚುವರಿ ಆಯುಕ್ತ ಎನ್. ತಿರುಮಗಲ್ ಅವರ ಜಾಮೀನು ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

‘ಪ್ರಕರಣದಲ್ಲಿತಿರುಮಗಲ್ ನೇರ ಭಾಗಿಯಾಗಿದ್ದಾರೆ ಎಂದು ಇಲಾಖೆಯ ಮೂವರು ಜಂಟಿ ಆಯುಕ್ತರು ಲಿಖಿತ ಹೇಳಿಕೆಗಳನ್ನು ನೀಡಿದ್ದಾರೆ’ ಎನ್ನುವ ವಿಷಯವನ್ನು ಹೈಕೋರ್ಟ್‌ನ ವಿಶೇಷ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಆರ್.ಮಹದೇವನ್ ಹಾಗೂ ಪಿ.ಡಿ. ಆದಿಕೇಶವಲು ಇದೇ ವೇಳೆ ಉಲ್ಲೇಖಿಸಿದ್ದಾರೆ.

ADVERTISEMENT

ದಾಖಲೆ ನಾಶ:2004ರಲ್ಲಿ ದೇಗುಲದಲ್ಲಿ ಕುಂಭಾಭಿಷೇಕ ನಡೆದ ಸಂದರ್ಭದಲ್ಲಿ ವಿಗ್ರಹಗಳು ನಾಪತ್ತೆಯಾಗಿವೆ ಎನ್ನಲಾಗುತ್ತಿದೆ. ಈ ವಿಗ್ರಹಗಳಿಗೆ ಹಾಗೂ ಕುಂಭಾಭಿಷೇಕಕ್ಕೆ ಸಂಬಂಧಿಸಿದ ದಾಖಲೆಗಳು ನಾಶವಾಗಿವೆ.

‘ದಾಖಲೆಗಳನ್ನು ನಾಶಗೊಳಿಸಲು ತಿರುಮಗಲ್ ಅವರು ಆಯುಕ್ತರಅನುಮತಿ ಕೋರಿದ್ದರು. ಆದರೆ ಇದಕ್ಕೆ ಅವರು ನಿರಾಕರಿಸಿದ್ದರು’ ಎಂದು ವಿಗ್ರಹ ದಳದ ಜಂಟಿ ಆಯುಕ್ತರಲ್ಲಿ ಒಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅವರು ದಾಖಲೆ ನಾಶಗೊಳಿಸಿದ್ದನ್ನು ನೋಡಿದ್ದಾಗಿ ಮತ್ತೊಬ್ಬ ಜಂಟಿ ಆಯುಕ್ತೆ ಹೇಳಿದ್ದರು.ತಿರುಮಗಲ್ ಹೊಸ ವಿಗ್ರಹಗಳನ್ನು ಇರಿಸಿದ್ದನ್ನು ನೋಡಿದ್ದಾಗಿ ಹಾಗೂ ಅವುಗಳನ್ನು ಪೂಜಿಸಲು ತಾವು ನಿರಾಕರಿಸಿದ್ದಾಗಿ ದೇಗುಲದಅರ್ಚಕರು ಹೇಳಿಕೆ ನೀಡಿದ್ದರು.

2004ರಲ್ಲಿ ದೇಗುಲದಲ್ಲಿ ಕುಂಭಾಭಿಷೇಕ ನಡೆದ ವೇಳೆ ಪುರಾತನ ರಾಹು, ಕೇತು ಹಾಗೂ ನವಿಲಿನ ಮೇಲೆ ಕುಳಿತಿರುವ ದೇವಿ ವಿಗ್ರಹಗಳು ನಾಪತ್ತೆಯಾಗಿವೆಎಂದು ಭಕ್ತರೊಬ್ಬರು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.