ತಿರುವನಂತಪುರ: ಕೇರಳದ ಕೊಚ್ಚಿಯ ಸಮಾವೇಶ ಕೇಂದ್ರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಲಾಗಿದೆ ಎಂದು ರಾಜ್ಯ ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಐಇಡಿಯಿಂದ ಸ್ಫೋಟ ಸಂಭವಿಸಿದೆ ಎಂದು ಡಿಜಿಪಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
‘ಇಂದು ಬೆಳಿಗ್ಗೆ 9.40ರ ಸುಮಾರಿಗೆ ಕೊಚ್ಚಿಯ ಕಲಮಸ್ಸೆರಿಯ ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ನಮ್ಮ ಮಾಹಿತಿಯ ಪ್ರಕಾರ ಗಾಯಗೊಂಡಿರುವ 36 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಡಿಜಿಪಿ ಹೇಳಿದರು.
ಆದರೆ, ಸಮಾವೇಶ ಕೇಂದ್ರದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಸಚಿವರಾದ ವಿ ಎನ್ ವಾಸವನ್ ಮತ್ತು ಆ್ಯಂಟನಿ ರಾಜು ಹೇಳಿದ್ದರಿಂದ ಎಷ್ಟು ಸ್ಫೋಟ ಸಂಭವಿಸಿವೆ ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಇತ್ತ, ಎರ್ನಾಕುಲಂನ ಕಾಂಗ್ರೆಸ್ ಸಂಸದ ಹೈಬಿ ಈಡನ್ ಅವರು, ಸಮಾವೇಶದಲ್ಲಿ ಭಾಗವಹಿಸಿದ್ದ ಅವರ ಸ್ನೇಹಿತರೊಬ್ಬರ ಪ್ರಕಾರ ಹಲವು ಸ್ಫೋಟಗಳು ನಡೆದಿವೆ ಎಂದು ಹೇಳಿದ್ದಾರೆ.
ಇದು ಭಯೋತ್ಪಾದನಾ ಕೃತ್ಯವೇ ಎಂಬ ಪ್ರಶ್ನೆಗೆ, ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಡಿಜಿಪಿ ಹೇಳಿದ್ದಾರೆ. ‘ತನಿಖೆಯ ನಂತರವೇ ನಾನು ವಿವರಗಳನ್ನು ದೃಢೀಕರಿಸಬಲ್ಲೆ. ನಾವು ಎಲ್ಲಾ ಕೋನಗಳಿಂದ ಪರಿಶೀಲಿಸುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರ ಪತ್ತೆ ಮಾಡುತ್ತೇವೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಾಂತಿ ಕಾಪಾಡಲು ಜನರಿಗೆ ಮನವಿ ಮಾಡಿದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷದ ಸಂದೇಶಗಳನ್ನು ಹರಡದಂತೆ ಕೇಳಿಕೊಂಡರು. ಪ್ರಚೋದನಕಾರಿ ಮಾಹಿತಿ ಹರಡುವವರು ಕಠಿಣ ಕ್ರಮವನ್ನುಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.