ನವದೆಹಲಿ: ಆಮ್ ಆದ್ಮಿ ಪಕ್ಷವು ದೆಹಲಿ ಮತ್ತು ಪಂಜಾಬ್ ನಂತರ ಈಗ ಗೋವಾದಲ್ಲಿಯೂ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿದೆ. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗವು ಪಕ್ಷದ ರಾಷ್ಟ್ರೀಯ ಸಂಚಾಲಕರಿಗೆ ಪತ್ರ ಬರೆದು ತಿಳಿಸಿದೆ.
1968ರ ಚುನಾವಣಾ ಚಿಹ್ನೆಗಳ (ಕಾಯ್ದಿರಿಸುವಿಕೆ ಮತ್ತು ಹಂಚಿಕೆ) ಆದೇಶದ ಪ್ಯಾರಾ ಸಂಖ್ಯೆ 6(ಎ)ನಲ್ಲಿ ಸೂಚಿಸಲಾಗಿರುವ ನಿಯಮದಂತೆ ಗೋವಾದಲ್ಲಿ ಎಎಪಿಯನ್ನು ಮಾನ್ಯ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿದೆ.
ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದೆಹಲಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ‘ಇನ್ನೊಂದು ರಾಜ್ಯದಲ್ಲಿ ನಮಗೆ ಮಾನ್ಯತೆ ಸಿಕ್ಕರೂ ಎಎಪಿ ರಾಷ್ಟ್ರೀಯ ಪಕ್ಷವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ದೆಹಲಿ ಮತ್ತು ಪಂಜಾಬ್ ನಂತರ ಎಎಪಿ ಈಗ ಗೋವಾದಲ್ಲಿಯೂ ರಾಜ್ಯ ಮಾನ್ಯತೆ ಪಡೆದ ಪಕ್ಷವಾಗಿದೆ. ನಾವು ಇನ್ನೂ ಒಂದು ರಾಜ್ಯದಲ್ಲಿ ಮಾನ್ಯತೆ ಪಡೆದರೆ, ‘ರಾಷ್ಟ್ರೀಯ ಪಕ್ಷ’ ಎಂದು ಘೋಷಿಸಲ್ಪಡುತ್ತೇವೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ. ಎಎಪಿ ಮತ್ತು ಅದರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದ್ದಾರೆ.
2022ರ ಫೆಬ್ರುವರಿಯಲ್ಲಿ ನಡೆದಿದ್ದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 39 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಶೇ. 6.8ರಷ್ಟು ಮತ ಪಡೆದಿದ್ದ ಎಎಪಿ ಎರಡು ಸ್ಥಾನಗಳಲ್ಲಿ ಗೆದ್ದಿತ್ತು.
ಪಕ್ಷವೊಂದು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ಕನಿಷ್ಠ ಮೂರು ರಾಜ್ಯಗಳಿಂದ ಲೋಕಸಭೆಯ ಶೇ 2ರಷ್ಟು ಸ್ಥಾನಗಳನ್ನು ಗೆಲ್ಲಬೇಕು. ಲೋಕಸಭೆ ಅಥವಾ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ, ಪಕ್ಷವು ಯಾವುದೇ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಶೇ 6ರಷ್ಟು ಮತ ಪಡೆದಿರಬೇಕಾಗುತ್ತದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.