ರಾಲೆಗನಸಿದ್ಧಿ, ಮಹಾರಾಷ್ಟ್ರ: ‘ಒಂದು ವೇಳೆ ನನಗೇನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿಯೇ ಜವಾಬ್ದಾರಿ, ಜನ ಅವರನ್ನೇ ಕೇಳುತ್ತಾರೆ’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ಕೇಂದ್ರದಲ್ಲಿ ಲೋಕಪಾಲ್‌ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ, ಜ.30ರಿಂದಜನ ಆಂದೋಲನ ಸತ್ಯಾಗ್ರಹ ಹೆಸರಿನಲ್ಲಿ ಅಣ್ಣಹಜಾರೆ(81) ಅನಿರ್ದಿಷ್ಟಾವಧಿಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
‘ಜನ ನನ್ನನ್ನು ಪರಿಸ್ಥಿತಿಯನ್ನು ನಿಭಾಯಿಸಿದ ವ್ಯಕ್ತಿ ಎನ್ನುವ ದೃಷ್ಟಿಯಲ್ಲಿ ನೋಡುತ್ತಾರೆಯೇ ಹೊರತು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದವನು ಎಂದು ಗುರುತಿಸುವುದಿಲ್ಲ. ಒಂದು ವೇಳೆ ನನಗೇನಾದರೂ ಆದರೆ, ಜನರು ಪ್ರಧಾನಿಯನ್ನು ಜವಾಬ್ದಾರನ್ನಾಗಿ ಮಾಡುತ್ತಾರೆ’ ಎಂದಿದ್ದಾರೆ.
‘ಒಂದು ವೇಳೆ ಲೋಕಪಾಲ್ ಅನುಷ್ಠಾನಗೊಂಡರೆ, ಸರಿಯಾದ ಸಾಕ್ಷ್ಯವಿದ್ದರೆ ಪ್ರಧಾನಿ ವಿರುದ್ಧವೂ ತನಿಖೆ ನಡೆಸಬಹುದು. ಅದೇ ರೀತಿ ಲೋಕಯುಕ್ತದ ಮೂಲಕ ಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲಾ ಶಾಸಕರನ್ನು ತನಿಖೆ ನಡೆಸುವ ಅವಕಾಶವಿದೆ. ಅದಕ್ಕಾಗಿಯೇ ಅವರು ಇದನ್ನು ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಯಾವ ಪಕ್ಷಕ್ಕೂ ಈ ಮಸೂದೆ ಬೇಡವಾಗಿದೆ. 2013ರಲ್ಲಿ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಅಂಗೀಕಾರಗೊಂಡಿದೆ. ಆದರೆ, ಸರ್ಕಾರ ಅದನ್ನು ಜಾರಿಗೊಳಿಸಬೇಕಷ್ಟೇ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.