ವಾರಾಣಸಿ: ಭಾರತದಲ್ಲಿ ಔರಂಗಜೇಬ್‌ನಂತವರು ಹುಟ್ಟಿಕೊಂಡಾಗ, ಈ ದೇಶದ ಮಣ್ಣು ಶಿವಾಜಿಯಂಥವರನ್ನೂ ಹುಟ್ಟು ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾಶಿ ವಿಶ್ವನಾಥ ಧಾಮದ ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ಅವರು, ವಾರಣಾಸಿಯ ನಾಗರಿಕ ಪರಂಪರೆಯನ್ನು ಶ್ಲಾಘಿಸಿದರು. ಎಷ್ಟೇ ಸುಲ್ತಾನರು ಬಂದರೂ, ಹೋದರೂ, ಬನಾರಸ್ ಮಾತ್ರ ಹಾಗೆಯೇ ಉಳಿದುಕೊಂಡಿದೆ ಎಂದು ಬಣ್ಣಿಸಿದರು.
‘ಆಕ್ರಮಣಕಾರರು ಈ ನಗರದ ಮೇಲೆ ದಾಳಿ ಮಾಡಿದ್ದಾರೆ. ನಾಶ ಮಾಡಲು ಪ್ರಯತ್ನಿಸಿದ್ದಾರೆ. ಇತಿಹಾಸವು ಔರಂಗಜೇಬನ ಕ್ರೌರ್ಯ, ಅವನ ಭಯೋತ್ಪಾದನೆಗೆ ಸಾಕ್ಷಿಯಾಗಿದೆ. ಆತ ಕತ್ತಿಯಿಂದ ನಾಗರಿಕತೆಯನ್ನು ಬದಲಾಯಿಸಲು ಪ್ರಯತ್ನಿಸಿದ್ದ. ಆತ ಮತಾಂಧತೆಯಿಂದ ಸಂಸ್ಕೃತಿಯನ್ನು ತುಳಿಯಲು ಪ್ರಯತ್ನಿಸಿದ. ಆದರೆ ಜಗತ್ತಿನ ಉಳಿದ ಭಾಗಗಳಿಗಿಂತಲೂ ಭಿನ್ನವಾದ ಈ ಮಣ್ಣು, ಒಬ್ಬ ಮೊಗಲ್ ಚಕ್ರವರ್ತಿಗೆ ಬದಲಾಗಿ ಶಿವಾಜಿಯೊಬ್ಬನನ್ನು ಹುಟ್ಟುಹಾಕಿತು,’ ಎಂದು ಹೇಳಿದರು.
‘ಸಲಾರ್ ಮಸೂದ್‌ನಂಥವರು ಎದ್ದು ನಿಂತಾಗ, ರಾಜಾ ಸುಹಾಲ್ ದೇವ್ ಅವರಂತಹ ಯೋಧರು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಿದರು’ ಎಂದು ಅವರು ಭಾರತದ ವೀರ ಪರಂಪರೆಯನ್ನು ಸ್ಮರಿಸಿದರು.
ಕಾಶಿ ವಿಶ್ವನಾಥ ಧಾಮದ ಹೊಸ ಸಂಕೀರ್ಣವು ಭವ್ಯವಾದ ಕಟ್ಟಡ ಮಾತ್ರವಲ್ಲ. ಭಾರತದ ‘ಸನಾತನ ಸಂಸ್ಕೃತಿ’ಯ ಪ್ರತೀಕ. ನಮ್ಮ ಆಧ್ಯಾತ್ಮಿಕ ಆತ್ಮ ಮತ್ತು ಭಾರತದ ಪ್ರಾಚೀನತೆ, ಸಂಪ್ರದಾಯಗಳ ಸಂಕೇತವಾಗಿದೆ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.