ಮಹೇಂದ್ರಗಢ (ಹರಿಯಾಣ): ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ‘ರಾಮ, ರಾಮ’ ಎನ್ನುವರನ್ನು ಬಂಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದರು.
ಹರಿಯಾಣದ ಮಹೇಂದ್ರಗಢದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶವನ್ನು ವಿಭಜಿಸಿ ಎರಡು ಮುಸ್ಲಿಂ ರಾಷ್ಟ್ರಗಳ (ಪಾಕಿಸ್ತಾನ ಮತ್ತು ಬಾಂಗ್ಲಾದೇಶ) ಹುಟ್ಟಿಗೆ ಕಾರಣವಾಯಿತು ಎಂದು ವಾಗ್ದಾಳಿ ನಡೆಸಿದರು.
‘ಹರಿಯಾಣದಲ್ಲಿ ಪ್ರತಿಯೊಬ್ಬರೂ ರಾಮ ನಾಮ ಜಪಿಸುವರು. ಜನರು ಪ್ರತಿ ಹತ್ತು ಹೆಜ್ಜೆಗೊಮ್ಮೆ ‘ರಾಮ, ರಾಮ’ ಎನ್ನುವರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮನ ಹೆಸರು ಹೇಳುವವರನ್ನು ಬಂಧಿಸಲಿದೆ’ ಎಂದು ಹೇಳಿದರು.
ದೇಶ ವಿಭಜನೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ಅನ್ನು ಟೀಕಿಸಿದ ಪ್ರಧಾನಿ, ‘ಕಾಂಗ್ರೆಸ್ ಮತ್ತು ‘ಇಂಡಿ’ ಒಕ್ಕೂಟವು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶವನ್ನು ಈಗಾಗಲೇ ವಿಭಜಿಸಿ ಎರಡು ಮುಸ್ಲಿಂ ದೇಶಗಳ ಹುಟ್ಟಿಗೆ ಕಾರಣರಾಗಿದ್ದಾರೆ. ದೇಶದ ಇನ್ನುಳಿದ ಭಾಗದಲ್ಲಿ ಮುಸ್ಲಿಮರಿಗೆ ಮೊದಲು ಹಕ್ಕು ಸಿಗಬೇಕು ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು.
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸ್ಥಾನಮಾನವನ್ನು ಕಲ್ಕತ್ತ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಆದರೆ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ದೂರಿದರು.
‘ನ್ಯಾಯಾಲಯ ಇಲ್ಲದೇ ಇರುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಶೋಷಿತರು ಮತ್ತು ನಮ್ಮ ದಲಿತ ಹಾಗೂ ಆದಿವಾಸಿ ಸಹೋದರ ಸಹೋದರಿಯರಿಗೆ ಏನು ಮಾಡಲು ಸಾಧ್ಯವಿತ್ತು? ನೀವು ವಿರೋಧಪಕ್ಷಗಳ ಮನೋಭಾವವನ್ನು ಗಮನಿಸಿ. ತೀರ್ಪು ಒಪ್ಪಿಕೊಳ್ಳಲು ಮಮತಾ ಸಿದ್ಧರಿಲ್ಲ. ಒಬಿಸಿ ಮೀಸಲಾತಿಯನ್ನು ಅವರು ಮುಸ್ಲಿಮರಿಗೆ ನೀಡುತ್ತಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.