ADVERTISEMENT

ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಪ್ರಬಲ ಅಭ್ಯರ್ಥಿಯಾಗಬಲ್ಲರು: ತೇಜಸ್ವಿ ಯಾದವ್

ಪಿಟಿಐ
Published 21 ಆಗಸ್ಟ್ 2022, 9:19 IST
Last Updated 21 ಆಗಸ್ಟ್ 2022, 9:19 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ನವದೆಹಲಿ: ಪ್ರಧಾನ ಮಂತ್ರಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದು ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.

ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದ್ದ ನಿತೀಶ್, ಮಹಾಘಟಬಂಧನದಲ್ಲಿ ಗುರುತಿಸಿರುವ ಪಕ್ಷಗಳ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿದ್ದರು.

ಇದರೊಂದಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಪಿಟಿಐ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್, ನಾನು ಈ ಪ್ರಶ್ನೆಯನ್ನು ನಿತೀಶ್ ಅವರಿಗೆ ಬಿಡುತ್ತೇನೆ. ಎಲ್ಲ ವಿಪಕ್ಷಗಳ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೂ ಪ್ರಧಾನಿ ಹುದ್ದೆಗೆ ವಿಪಕ್ಷಗಳು ಪರಿಗಣಿಸಿದರೆ ಖಂಡಿತವಾಗಿಯೂನಿತೀಶ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದು ಹೇಳಿದ್ದಾರೆ.

ಕಳೆದ 50 ವರ್ಷಗಳಲ್ಲಿ ನಿತೀಶ್, ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೀಸಲಾತಿ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. 37 ವರ್ಷಗಳಿಗೂ ಹೆಚ್ಚು ಸಂಸದೀಯ ಹಾಗೂ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ ಎಂದು ಹೊಗಳಿದರು.

ಬಿಹಾರದಲ್ಲಿ 'ಜಂಗಲ್ ರಾಜ್' ಮರಳಲಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಯಾದವ್, ಈ ತಂತ್ರಗಳನ್ನೆಲ್ಲ ಜನರು ಅರ್ಥಮಾಡಿಕೊಳ್ಳುತ್ತಾರೆ. ಇವೆಲ್ಲವೂ ಬಿಜೆಪಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:

ಬಿಜೆಪಿಯ ಸುಳ್ಳು ಪ್ರಚಾರವನ್ನು ನಂಬಬಾರದು. ಮಾಧ್ಯಮಗಳು ಸತ್ಯ ಶೋಧನೆಯನ್ನು ಮಾಡಬೇಕು ಎಂದು ವಿನಂತಿಸಿದರು.

ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ಕುರಿತು ಮಾತನಾಡಿರುವ ಅವರು, ಆದ್ಯತೆಯ ಮೇರೆಗೆ ಈಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದ್ದೇವೆ ಎಂದು ಹೇಳಿದರು.

ಬಿಹಾರಕ್ಕೆ ವಿಶೇಷ ಆದ್ಯತೆ ನೀಡುವಂತೆಯೂ ಕೇಂದ್ರ ಸರ್ಕಾರವನ್ನು ತೇಜಸ್ವಿ ಯಾದವ್ ಮನವಿ ಮಾಡಿದರು. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಕೊಡುವ ಭರವಸೆಯಂತೆ ಬಿಹಾರದ ಜನರ ಬೇಡಿಕೆಗಳನ್ನು ಈಡೇರಿಸುವಂತೆ ನಾನು ನೆನಪಿಸಲು ಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.