ನವದೆಹಲಿ: ‘ಪ್ರಸ್ತುತ ನ್ಯಾಯಾಂಗದ ಮೇಲೆ ‘ಅತ್ಯಧಿಕ ಒತ್ತಡ’ ಇದೆ. ಆದರೆ, ಒಂದೊಮ್ಮೆ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರವು ಕೇಂದ್ರದಲ್ಲಿ ರಚನೆಯಾದರೆ, ನ್ಯಾಯಾಂಗದ ಮೇಲಿನ ಒತ್ತಡವನ್ನು ನಿವಾರಿಸಿ ಸ್ವತಂತ್ರಗೊಳಿಸಲಾಗುವುದು. ಹೀಗಾದರೆ, ಜೂನ್ 5ರ ಬಳಿಕ ನಾನು ಜೈಲಿನಿಂದಲೂ ಬಿಡುಗಡೆಯಾಗುತ್ತೇನೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಬುಧವಾರ ಹೇಳಿದರು.
ಕೇಜ್ರಿವಾಲ್ ಅವರನ್ನು ಪಿಟಿಐ ವೀಡಿಯೊಸ್ ಸಂದರ್ಶಿಸಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಅವರು, ಇತ್ತೀಚೆಗಷ್ಟೇ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಕೇಜ್ರಿವಾಲ್ ಅವರು ಪಾಲ್ಗೊಂಡ ಎಲ್ಲ ಚುನಾವಣಾ ರ್‍ಯಾಲಿಗಳಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾವು ಬಿಡುಗಡೆಗೊಳ್ಳುವ ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.
‘ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೇರಿದರೆ ನೀವು ಬಿಡುಗಡೆಯಾಗುವುದಾದರೆ, ಅದು ಕೂಡ ನ್ಯಾಯಾಂಗದ ಮೇಲೆ ಒತ್ತಡ ಹೇರಿದಂತೆಯೇ ಆಗುವುದಿಲ್ಲವೆ’ ಎಂದು ಪ್ರಶ್ನಿಸಲಾಯಿತು. ‘ಈ ಹೊತ್ತಿನಲ್ಲಿ ಎಷ್ಟೊಂದು ಒತ್ತಡದಲ್ಲಿ ನ್ಯಾಯಾಂಗವು ಕೆಲಸ ಮಾಡುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ಈ ಒತ್ತಡವನ್ನು ಇಲ್ಲವಾಗಿಸಲಿದೆ. ಆ ಮೂಲಕ ನ್ಯಾಯಾಂಗವು ಎಲ್ಲರನ್ನು ಸಮಾನವಾಗಿ ನೋಡುವ ರೀತಿ ಕೆಲಸ ನಿರ್ವಹಿಸಲಿದೆ’ ಎಂದು ಕೇಜ್ರಿವಾಲ್ ಅವರು ಉತ್ತರಿಸಿದರು.
‘ನನ್ನ ಮೇಲಿರುವ ಎಲ್ಲವೂ ಸುಳ್ಳಿನ ಪ್ರಕರಣಗಳು. ಎಲ್ಲಿಯೂ ಹಣದ ಅಕ್ರಮ ನಡೆದಿಲ್ಲ. ಒಂದು ರೂಪಾಯಿ ಅಕ್ರಮ ನಡೆದದ್ದು ಪತ್ತೆಯಾಗಿಲ್ಲ. ಭ್ರಷ್ಟಾಚಾರ ನಡೆದಿದ್ದೇ ಹೌದಾದರೆ, ಆ ಹಣವು ಎಲ್ಲಿ ಹೋಯಿತು’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.
ನನ್ನ ಪತ್ನಿ ಸುನಿತಾಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆಕೆ ಭವಿಷ್ಯದಲ್ಲಿ ಎಂದಿಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯದಲ್ಲಿ ಆಸಕ್ತಿ ಇಲ್ಲದಿದ್ದರೂ ನನ್ನ ಬಂಧನವಾಗಿದ್ದರಿಂದ ಆಕೆ ಬಹಳ ತೀವ್ರವಾಗಿ ಸಾರ್ವಜನಿಕವಾಗಿ ತೊಡಗಿಕೊಳ್ಳಬೇಕಾಯಿತು ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.