ADVERTISEMENT

ನೀರವ್, ಲಲಿತ್ ಅವರನ್ನು ಟೀಕಿಸಿದರೆ ಬಿಜೆಪಿ ನೊಂದುಕೊಳ್ಳುವುದೇಕೆ: ಖರ್ಗೆ ಪ್ರಶ್ನೆ

ಪಿಟಿಐ
Published 26 ಮಾರ್ಚ್ 2023, 10:15 IST
Last Updated 26 ಮಾರ್ಚ್ 2023, 10:15 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ರಾಹುಲ್‌ ಗಾಂಧಿ ಅವರು ದೇಶ ಬಿಟ್ಟು ಪಲಾಯನ ಮಾಡಿರುವ ನೀರವ್‌ ಮೋದಿ ಹಾಗೂ ಲಲಿತ್‌ ಮೋದಿ ಅವರನ್ನು ಟೀಕಿಸಿದರೆ, ಆಡಳಿತಾರೂಢ ಬಿಜೆಪಿ ನೊಂದುಕೊಳ್ಳುತ್ತಿರುವುದೇಕೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷವು ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಪ್ರಜಾಪ್ರಭುತ್ವದ ಉಳಿವಿಗಾಗಿ ರಾಹುಲ್‌ ಗಾಂಧಿ ಬೆನ್ನಿಗೆ ನಿಂತ ಎಲ್ಲ ವಿರೋಧ ಪಕ್ಷಗಳಿಗೂ ಧನ್ಯವಾದ ಎಂದಿದ್ದಾರೆ.

'ಇದು ಕೇವಲ ಒಂದು ಸತ್ಯಾಗ್ರಹವಷ್ಟೇ. ಇಂತಹ ಸಾಕಷ್ಟು ಸತ್ಯಾಗ್ರಹಗಳು ದೇಶದುದ್ದಕ್ಕೂ ನಡೆಯಲಿವೆ. ನಾವು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಾಕ್‌ ಸ್ವಾತಂತ್ರ್ಯದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ' ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ರಾಹುಲ್‌ ಗಾಂಧಿ ಅವರು 'ಮೋದಿ' ಉಪನಾಮದ ಕುರಿತು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವ ಬಿಜೆಪಿ, ಹಿಂದುಳಿದ ವರ್ಗದವರನ್ನು (ಒಬಿಸಿ) ಅವಮಾನಿಸಲಾಗಿದೆ ಎಂದು ಆರೋಪಿಸಿದೆ. ಈ ಸಂಬಂಧ ಖರ್ಗೆ ಕಿಡಿಕಾರಿದ್ದಾರೆ.

'ಅವರು (ಬಿಜೆಪಿಯವರು) ಈಗ ಒಬಿಸಿ ಬಗ್ಗೆ ಮಾತನಾಡುತ್ತಿದ್ದಾರೆ. ಲಲಿತ್‌ ಮೋದಿ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಒಬಿಸಿಗೆ ಸೇರಿದವರೇ? ಅವರೆಲ್ಲಾ ಜನರ ಹಣ ಲಪಟಾಯಿಸಿ ದೇಶದಿಂದ ಓಡಿಹೋಗಿದ್ದಾರೆ. ಪಲಾಯನ ಮಾಡಿರುವವರನ್ನು ಟೀಕಿಸಿದರೆ, ನೀವು (ಬಿಜೆಪಿ) ನೊಂದುಕೊಳ್ಳುತ್ತಿರುವುದೇಕೆ?. ಲೂಟಿ ಮಾಡಿದವರನ್ನು ವಿದೇಶಕ್ಕೆ ಹೋಗಲು ಬಿಟ್ಟು, ದೇಶವನ್ನು ರಕ್ಷಿಸಲು ಹೊರಟ ವ್ಯಕ್ತಿಯನ್ನು ಶಿಕ್ಷಿಸುತ್ತಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಹುಲ್‌ ಗಾಂಧಿ ಅವರು ದೇಶದ ಜನರಿಗಾಗಿ, ಮಹಿಳೆಯರಿಗಾಗಿ, ಯುವಕರಿಗಾಗಿ ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಹೋರಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧವೂ ಗುಡುಗಿರುವ ಖರ್ಗೆ, ಕಾಂಗ್ರೆಸ್‌ ದುರ್ಬಲವಾಗಿದೆ ಎಂದು ಅವರು ಭಾವಿಸಿದ್ದಾರೆ. ಯಾರಾದರೂ ತಮ್ಮ ದುರಹಂಕಾರದ ಮೂಲಕ ನಮ್ಮನ್ನು ಸೆದೆಬಡಿಯಲು ಪ್ರಯತ್ನಿಸಿದರೆ, ತಕ್ಕ ಉತ್ತರ ನೀಡುತ್ತೇವೆ ಎಂಬುದು ಅವರಿಗೆ ಗೊತ್ತಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

'ನೀವು ಅವರ (ರಾಹುಲ್‌ ಗಾಂಧಿ) ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದೀರಿ. ಅವರು ಹೇಳಿರುವುದು ಚುನಾವಣೆಯ ಸಂದರ್ಭದಲ್ಲಿ ಮತ್ತು ಯಾರನ್ನೂ ನೋಯಿಸುವ ಉದ್ದೇಶ ಅವರದ್ದಾಗಿರಲಿಲ್ಲ. ಆದರೆ, ಕೋಲಾರದಲ್ಲಿ ಹೇಳಿದ ಮಾತಿಗೆ ಗುಜರಾತ್‌ನ ಸೂರತ್‌ನಲ್ಲಿ ಪ್ರಕರಣ ದಾಖಲಿಸಲಾಯಿತು. ನಿಮಗೆ ತಾಕತ್ತಿದ್ದರೆ, ಕರ್ನಾಟಕದಲ್ಲಿ ಪ್ರಕರಣ ದಾಖಲಿಸಬೇಕಿತ್ತು' ಎಂದು ಸವಾಲು ಹಾಕಿದ್ದಾರೆ.

ಅದಾನಿ ವಿಚಾರವಾಗಿ ಸಂಸತ್‌ನಲ್ಲಿ ಮತ್ತೆ ಧ್ವನಿ ಎತ್ತುತ್ತಾರೆ ಎಂಬ ಭಯದಲ್ಲಿ ಬಿಜೆಪಿಯು ರಾಹುಲ್‌ ಅವರ ಬಾಯಿ ಮುಚ್ಚಿಸಲು ಯತ್ನಿಸಿದೆ. ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ನಡೆಸಿದ 'ಭಾರತ್‌ ಜೋಡೊ ಯಾತ್ರೆ'ಯ ಯಶಸ್ಸಿನಿಂದ ಬಿಜೆಪಿ ವಿಚಲಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

'ಅವರು (ರಾಹುಲ್‌ ಗಾಂಧಿ) ಸಂಸತ್ತಿನಲ್ಲಿ ಅದಾನಿ ವಿಚಾರವಾಗಿ ಪ್ರಶ್ನೆ ಮಾಡುತ್ತಾರೆ ಎಂದು ಬಿಜೆಪಿ ಹೆದರಿದೆ. ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ಅವರು ಸಾಕಷ್ಟು ಕೆಳ ಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ಮೋದಿಗೆ ಮಾನಹಾನಿ ಪ್ರಕರಣಗಳಲ್ಲಿ ಶಿಕ್ಷೆಯಾಗಬೇಕಿತ್ತು. ಆದರೆ, ಗಾಂಧಿ ಕುಟುಂಬದವರು ಉದಾರಿಗಳು. ಯಾರಾದರೂ ತಮ್ಮ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿದರೆ, ಕಡೆಗಣಿಸುತ್ತಾರೆ' ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿಗೆ ಬೆಂಬಲ ಘೋಷಿಸಿದ ವಿರೋಧ ಪಕ್ಷಗಳ ಬಗ್ಗೆಯೂ ಮಾತನಾಡಿದ ಖರ್ಗೆ, 'ಎಲ್ಲ ವಿರೋಧ ಪಕ್ಷಗಳು ರಾಹುಲ್‌ ಗಾಂಧಿಯವರನ್ನು ಬೆಂಬಲಿಸಿರುವುದು ಸಂತಸ ನೀಡಿದೆ. ಪ್ರಜಾಪ್ರಭುತ್ವವವನ್ನು ಉಳಿಸಬೇಕಿರುವ ಈ ಸಮಯದಲ್ಲಿ ನಮ್ಮೊಂದಿಗೆ ನಿಂತದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ' ಎಂದಿದ್ದಾರೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಸಂಸದ ರಾಹುಲ್‌ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ (ಮಾರ್ಚ್‌ 24 ರಂದು) ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.