ಲಖನೌ:ಮೈತ್ರಿ ಮುರಿದಿದೆ ಎಂದಾದಲ್ಲಿ ಏಕಾಂಗಿಯಾಗಿ ಉಪಚುನಾವಣೆ ಎದುರಿಸಲು ನಮ್ಮ ಪಕ್ಷವೂ ಸಿದ್ಧವಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಮೈತ್ರಿ ಮುಂದುವರಿಸದಿರುವ ಬಗ್ಗೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿಸುಳಿವು ನೀಡಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ.
ರಾಜ್ಯದ11 ವಿಧಾನಸಭಾ ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರಿಂದ ಈ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಗೆ ಸೋಲಾದ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಮಾಯಾವತಿ ಸೋಮವಾರ ಸುಳಿವು ನೀಡಿದ್ದರು.
ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ‘ಮೈತ್ರಿ ಮುರಿದಿದೆ ಎಂದಾದಲ್ಲಿ ಸಮಾಜವಾದಿ ಪಕ್ಷ ಚುನಾವಣೆಗೆ ಸಿದ್ಧತೆ ನಡೆಸಲಿದೆ. 11 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ’ ಎಂದಿದ್ದಾರೆ.
‘ಈ ಮೈತ್ರಿಯಿಂದ ಪ್ರಯೋಜನವಿಲ್ಲ. ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಯಾದವ ಸಮುದಾಯದ ಮತ ನಮಗೆ ದೊರೆಯಲಿಲ್ಲ. ಅಖಿಲೇಶ್ ಯಾದವ್ (ಎಸ್‌ಪಿ ನಾಯಕ) ಮತ್ತು ಅವರ ಕುಟುಂಬದವರಿಗೂ ಯಾದವರ ಮತಗಳು ದೊರೆಯಲಿಲ್ಲ’ ಎಂದು ಮಾಯಾವತಿ ಹೇಳಿದ್ದಾರೆ. ಅಖಿಲೇಶ್ ಅವರಿಗೆ ಪತ್ನಿಯನ್ನೇ ಗೆಲ್ಲಿಸಲಾಗಲಿಲ್ಲ ಎಂದೂ ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.