ADVERTISEMENT

ವಿದೇಶ ವ್ಯಾಸಂಗಕ್ಕೆ ತೆರಳುವ ಮಗನಿಗೆ ಬೀಳ್ಕೊಡಲು ಕೈದಿಗೆ ಪೆರೋಲ್ ನೀಡಿದ ಹೈಕೋರ್ಟ್

ಪಿಟಿಐ
Published 13 ಜುಲೈ 2024, 5:37 IST
Last Updated 13 ಜುಲೈ 2024, 5:37 IST
<div class="paragraphs"><p>ಬಾಂಬೆ ಹೈಕೋರ್ಟ್</p></div>

ಬಾಂಬೆ ಹೈಕೋರ್ಟ್

   

ಮುಂಬೈ: ಆಸ್ಟ್ರೇಲಿಯಾಗೆ ವಿದ್ಯಾಭ್ಯಾಸಕ್ಕೆ ತೆರಳುವ ಪುತ್ರನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಲು ವ್ಯಕ್ತಿಯೊಬ್ಬರಿಗೆ ಬಾಂಬೆ ಹೈಕೋರ್ಟ್‌ ಪೆರೋಲ್ ನೀಡಿದೆ.

ದುಃಖದ ಸಂದರ್ಭದಲ್ಲಿ ಪೆರೋಲ್ ನೀಡಬಹುದಾದರೆ, ಸಂತಸದ ಕ್ಷಣ ಹಂಚಿಕೊಳ್ಳಲು ಯಾಕೆ ಪೆರೋಲ್ ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಪೆರೋಲ್ ಮಂಜೂರು ಮಾಡಿದೆ.

ADVERTISEMENT

‘ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಹೊಂದಲು ಹಾಗೂ ಕೌಟುಂಬಿಕ ಆಗುಹೋಗುಗಳಲ್ಲಿ ಭಾಗಿಯಾಗಲು ಅಪರಾಧಿಗೆ ಈ ಮೂಲಕ (ಪೆರೋಲ್) ತಾತ್ಕಾಲಿಕ ಬಿಡುಗಡೆಯನ್ನು ನೀಡಲಾಗುತ್ತದೆ. ಜೈಲಿನಲ್ಲಿ ಇದ್ದರೂ ಅಪರಾಧಿಯೂ ಯಾರೋ ಒಬ್ಬರ ಪುತ್ರ, ಪತಿ, ತಂದೆ ಅಥವಾ ಸಹೋದರ ಎನ್ನುವುದು ಸತ್ಯ’ ಎಂದು ಕೋರ್ಟ್ ನುಡಿದಿದೆ.

ಪೆರೋಲ್ ಮತ್ತು ಫರ್ಲೋ ನಿಬಂಧನೆಗಳು ಅಪರಾಧಿಗಳನ್ನು ಮಾನವೀಯ ದೃಷ್ಠಿಯಿಂದ ನೋಡಬೇಕು ಎಂದು ನ್ಯಾಯಮೂರ್ತಿಗಳಾದ ಭಾರತಿ ಡಂಗ್ರೆ ಹಾಗೂ ಮಂಜೂಷ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಜುಲೈ 9ರಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಉನ್ನತ ವ್ಯಾಸಂಗಕ್ಕಾಗಿ ಪುತ್ರ ಆಸ್ಟ್ರೇಲಿಯಾಗೆ ತೆರಳುತ್ತಿದ್ದು, ಅವನ ಶಿಕ್ಷಣಕ್ಕೆ ಬೇಕಾದ ಶುಲ್ಕಕ್ಕೆ ವ್ಯವಸ್ಥೆ ಮಾಡಿ, ಆತನನ್ನು ಬೀಳ್ಕೊಡುಗೆ ನೀಡಬೇಕು. ಹೀಗಾಗಿ ಪೆರೋಲ್ ನೀಡಬೇಕು ಎಂದು ವಿವೇಕ್ ಶ್ರೀವಾತ್ಸವ ಅವರು ನ್ಯಾಯಾಲಯವನ್ನು ಕೋರಿದ್ದರು.

ಸಾಮಾನ್ಯವಾಗಿ ತುರ್ತು ಅಗತ್ಯ ಇದ್ದಾಗ ಮಾತ್ರ ಪೆರೋಲ್ ನೀಡಲಾಗುತ್ತದೆ. ಪುತ್ರನ ಶಿಕ್ಷಣಕ್ಕೆ ಹಣ ವ್ಯವಸ್ಥೆ ಮಾಡುವುದು, ಅವನಿಗೆ ಬೀಳ್ಕೊಡುಗೆ ನೀಡುವುದು ಮುಂತಾದವುಗಳು ಪೆರೋಲ್ ನೀಡುವುದಕ್ಕೆ ಕಾರಣಗಳಲ್ಲ ಎಂದು ಪ್ರಾಸಿಕ್ಯೂಷನ್ ಪೆರೋಲ್‌ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತು.

‘ಇದನ್ನು ಮನ್ನಿಸದ ಹೈಕೋರ್ಟ್‌, ‘ಸಂತೋಷವು ದುಃಖದಂತೆ ಒಂದು ಭಾವನೆ. ದುಃಖ ಹಂಚಿಕೊಳ್ಳಲು ಪೆರೋಲ್ ನೀಡುವುದಾದರೆ, ಸಂತೋಷದಲ್ಲಿ ಭಾಗಿಯಾಗಲು ಯಾಕೆ ನೀಡಬಾರದು’ ಎಂದು ಪ್ರಶ್ನಿಸಿತು.

‘ಮದುವೆಯನ್ನು ಸಂಭ್ರಮಿಸಲು ಪೆರೋಲ್ ನೀಡಬಹುದಾದರೆ, ಈ ಲಾಭವನ್ನು ವಿದೇಶದಲ್ಲಿ ವ್ಯಾಸಂಗ ಮಾಡಲು ಹೊರಟಿರುವ ಪುತ್ರನ ಶುಲ್ಕಕ್ಕೆ ಹಣ ವ್ಯವಸ್ಥೆ ಮಾಡಿ, ಬೀಳ್ಕೊಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದವರಿಗೆ ಯಾಕೆ ನೀಡಬಾರದು’ ಎಂದು ಪ್ರಶ್ನಿಸಿದ ಕೋರ್ಟ್ ಶ್ರೀವಾತ್ಸವ ಅವರಿಗೆ 10 ದಿನಗಳ ಪೆರೋಲ್ ನೀಡಿತು.

2012ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿರುವ ಶ್ರೀವಾತ್ಸವ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕೆಳ ನ್ಯಾಯಾಲಯದ ಈ ತೀರ್ಪಿನ ವಿರುದ್ಧ 2019ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ತನ್ನ ಪುತ್ರ ಆಸ್ಟ್ರೇಲಿಯಾಗೆ ವಿದ್ಯಾಭ್ಯಾಸಕ್ಕೆ ತೆರಳಲಿದ್ದು, ಅದರ ಖರ್ಚಿಗೆ 36 ಲಕ್ಷ ಬೇಕಿದೆ. ಈ ಹಣ ವ್ಯವಸ್ಥೆ ಮಾಡಲು ಒಂದು ತಿಂಗಳ ಪೆರೋಲ್ ನೀಡಬೇಕು ಎಂದು ಶ್ರೀವಾತ್ಸವ ಭಿನ್ನವಿಸಿಕೊಂಡಿದ್ದರು.

ಅಪರಾಧಿಯನ್ನು ಪೆರೋಲ್ ಅಥವಾ ಫರ್ಲೋ ಮೇಲೆ ಬಿಡುಗಡೆ ಮಾಡಲು ರೂಪಿಸಲಾದ ನಿಯಮಗಳ ಗುರಿ ಮತ್ತು ಉದ್ದೇಶವು ಕೈದಿ ತನ್ನ ಕೌಟುಂಬಿಕ ಜೀವನದಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಮತ್ತು ಕೌಟುಂಬಿಕ ವಿಷಯಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.