ADVERTISEMENT

ಕೋವಿಡ್‌ನಿಂದ ಚೇತರಿಕೆಯಾದವರಲ್ಲಿ ಕೋವ್ಯಾಕ್ಸಿನ್ ಒಂದೇ ಡೋಸ್‌ ಹೆಚ್ಚು ಪರಿಣಾಮಕಾರಿ

ಪಿಟಿಐ
Published 28 ಆಗಸ್ಟ್ 2021, 12:38 IST
Last Updated 28 ಆಗಸ್ಟ್ 2021, 12:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕಿಗೆ ಒಳಗಾಗದ ವ್ಯಕ್ತಿಯಲ್ಲಿ ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳಿಂದ ಸೃಷ್ಟಿವಾಗುವಷ್ಟೇ ಪ್ರಮಾಣದ ಪ್ರತಿಕಾಯಗಳು, ಕೋವಿಡ್‌–19ನಿಂದ ಗುಣಮುಖರಾದ ವ್ಯಕ್ತಿಗೆ ಇದೇ ಲಸಿಕೆಯ ಒಂದೇ ಡೋಸ್‌ ನೀಡಿದಾಗ ಉತ್ಪತ್ತಿಯಾಗುತ್ತವೆ ಎಂಬುದು ಐಸಿಎಂಆರ್‌ನ ಅಧ್ಯಯನದಿಂದ ತಿಳಿದುಬಂದಿದೆ.

ಈ ಅಧ್ಯಯನ ವರದಿ ‘ಇಂಡಿಯನ್‌ ಜರ್ನಲ್‌ ಆಫ್‌ ಮೆಡಿಕಲ್‌ ರಿಸರ್ಚ್’ನಲ್ಲಿ ಶನಿವಾರ ಪ್ರಕಟವಾಗಿದೆ.

‘ಇನ್ನಷ್ಟು ಹೆಚ್ಚು ಜನರನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಆಗಲೂ ಲಸಿಕೆಯ ಪರಿಣಾಮಕಾರಿತ್ವ ದೃಢಪಟ್ಟರೆ, ಕೋವಿಡ್‌ನಿಂದ ಗುಣಮುಖರಾದವರಿಗೆ ಕೋವ್ಯಾಕ್ಸಿನ್‌ನ ಒಂದೇ ಡೋಸ್‌ ನೀಡುವಂತೆ ಶಿಫಾರಸು ಮಾಡಬಹುದು. ಇದರಿಂದ ಲಸಿಕೆ ಪೂರೈಕೆಯಲ್ಲಿ ಮಿತಿ ಇದ್ದಾಗ್ಯೂ, ಹೆಚ್ಚು ಜನರಿಗೆ ಲಾಭವಾಗುವುದು’ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಚೆನ್ನೈನಲ್ಲಿ ಕಳೆದ ಫೆಬ್ರುವರಿಯಿಂದ ಮೇ ವರೆಗಿನ ಅವಧಿಯಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದ 114 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಹೈದರಾಬಾದ್‌ ಮೂಲಕ ಭಾರತ್‌ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಲಸಿಕೆಯನ್ನು (ಬಿಬಿವಿ152) ಅಭಿವೃದ್ಧಿಪಡಿಸಿದೆ. 4 ರಿಂದ 6 ವಾರಗಳ ಅಂತರದಲ್ಲಿ ಈ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಈ ಲಸಿಕೆಯ ತುರ್ತು ಸಂದರ್ಭದ ಬಳಕೆಗೆ ಕೇಂದ್ರ ಸರ್ಕಾರ ಜನೆವರಿಯಲ್ಲಿ ಅನುಮೋದನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.