ADVERTISEMENT

ಜಾರ್ಖಂಡ್‌: ಬಿಜೆಪಿ ಅಧಿಕಾರಕ್ಕೆ ಬಂದರೆ, ನುಸುಳುಕೋರರ ಪತ್ತೆಗೆ ಸಮಿತಿ; ಅಮಿತ್ ಶಾ

ಪಿಟಿಐ
Published 11 ನವೆಂಬರ್ 2024, 10:39 IST
Last Updated 11 ನವೆಂಬರ್ 2024, 10:39 IST
ಅಮಿತ್ ಶಾ 
ಅಮಿತ್ ಶಾ    

ಸೆರೈಕೆಲಾ(ಜಾರ್ಖಂಡ್): ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನುಸುಳುಕೋರರ ಪತ್ತೆಗೆ ಸಮಿತಿ ರಚಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನುಸುಳುಕೋರರು ಕಬಳಿಸಿರುವ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದಿದ್ದಾರೆ.

ಅಲ್ಲದೆ, ಬುಡಕಟ್ಟು ಮಹಿಳೆಯರನ್ನು ವಿವಾಹವಾದ ನುಸುಳುಕೋರರಿಗೆ ಭೂಮಿಯನ್ನು ಹಸ್ತಾಂತರಿಸುವುದನ್ನು ತಡೆಯಲು ಶಾಸನವನ್ನು ತರಲಾಗುವುದು ಎಂದು ಶಾ ಹೇಳಿದ್ದಾರೆ. ಜೆಎಂಎಂ ನೇತೃತ್ವದ ಆಡಳಿತವು ಬಾಂಗ್ಲಾದೇಶಿ ನುಸುಳುಕೋರರನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ. ನುಸುಳುಕೋರರು ನಮ್ಮ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಅವರು ಬುಡಕಟ್ಟು ಮಹಿಳೆಯರನ್ನು ಮದುವೆಯಾದರೆ ನುಸುಳುಕೋರರಿಗೆ ಭೂಮಿಯನ್ನು ವರ್ಗಾಯಿಸುವುದನ್ನು ತಡೆಯಲು ನಾವು ಕಾನೂನು ತರುತ್ತೇವೆ. ನುಸುಳುಕೋರರನ್ನು ಓಡಿಸಲು ಮತ್ತು ಭೂಮಿಯನ್ನು ಮರಳಿ ಪಡೆಯುವ ಉದ್ದೇಶದಿಂದ ನುಸುಳುಕೋರರನ್ನು ಗುರುತಿಸಲು ಸಮಿತಿಯನ್ನು ರಚಿಸುತ್ತೇವೆ’ಎಂದು ಸೆರೈಕೆಲಾದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಶಾ ಹೇಳಿದ್ದಾರೆ.

ADVERTISEMENT

ನುಸುಳುಕೋರರ ಬಗ್ಗೆ ಪ್ರಶ್ನೆ ಎತ್ತಿದ ಚಂಪೈ ಸೊರೇನ್ ಅವರನ್ನು ಅವಮಾನಿಸಿದ ಹೇಮಂತ್ ಸೊರೇನ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದರು ಎಂದು ದೂರಿದ್ದಾರೆ.

ಜೆಎಂಎಂ–ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ವೈಯಕ್ತಿಕ ಏಳಿಗೆಗೆ ಮಾತ್ರ ಶ್ರಮಿಸುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಜೆಂಎಂಎಂ ನೇತೃತ್ವದ ಸರ್ಕಾರವು ₹1,000 ಕೋಟಿಯ ಎಂಎನ್‌ಆರ್‌ಇಜಿಎ ಹಗರಣ, ₹300 ಕೋಟಿಯ ಭೂಹಗರಣ, ₹1,000 ಕೋಟಿಯ ಗಣಿಗಾರಿಕೆ ಹಗರಣ ಮತ್ತು ಬಹುಕೋಟಿ ಅಬಕಾರಿ ಹಗರಣದಲ್ಲಿ ತೊಡಗಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.