ADVERTISEMENT

ವಿಶ್ವದ ಅಗ್ರ 25 ಸಂಸ್ಥೆ: ಐಐಎಂ–ಬೆಂಗಳೂರಿಗೆ ಸ್ಥಾನ

ಐಐಎಂ–ಬೆಂಗಳೂರಿಗೆ ಪಟ್ಟಿಯಲ್ಲಿನ ಅಗ್ರ 50 ಸಂಸ್ಥೆಗಳಲ್ಲಿ ಸ್ಥಾನ: ಐಐಎಂ– ಅಹಮದಾಬಾದ್ ಟಾಪ್ 25ನಲ್ಲಿ ಸ್ಥಾನ

ಪಿಟಿಐ
Published 10 ಏಪ್ರಿಲ್ 2024, 16:30 IST
Last Updated 10 ಏಪ್ರಿಲ್ 2024, 16:30 IST
   

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ ‘ಕ್ಯೂಎಸ್‌ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ಸ್‌ ಬೈ ಸಬ್ಜೆಕ್ಟ್‌’ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದ್ದು, ವ್ಯವಹಾರ ಮತ್ತು ವ್ಯವಸ್ಥಾಪನಾ ಅಧ್ಯಯನಕ್ಕೆ ಸಂಬಂಧಿಸಿದ ಮೊದಲ 25 ಅಗ್ರ ಸಂಸ್ಥೆಗಳಲ್ಲಿ ಐಐಎಂ– ಅಹಮದಾಬಾದ್ ಸ್ಥಾನ ಪಡೆದಿದೆ. 

ಐಐಎಂ–ಬೆಂಗಳೂರು ಹಾಗೂ ಐಐಎಂ–ಕಲ್ಕತ್ತ, ಈ ಪಟ್ಟಿಯಲ್ಲಿನ ಅಗ್ರ 50 ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ.

ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ರ‍್ಯಾಂಕಿಂಗ್‌ ನೀಡುವ ಲಂಡನ್‌ ಮೂಲದ ಕ್ವಾಕ್ವರೇಲಿ ಸೈಮಂಡ್ಸ್‌(ಕ್ಯೂಎಸ್‌) ಎಂಬ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.  

ADVERTISEMENT

ಭಾರತದಲ್ಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಅತಿಹೆಚ್ಚು ರ‍್ಯಾಂಕ್‌ ಪಡೆದ ವಿಶ್ವವಿದ್ಯಾಲಯ ಸ್ಥಾನ ಪಡೆದಿದೆ. ಅಭಿವೃದ್ಧಿ ಅಧ್ಯಯನಕ್ಕೆ ಸಂಬಂಧಿಸಿದ ಜಾಗತಿಕ ಮಟ್ಟದ ರ‍್ಯಾಂಕಿಂಗ್‌ನಲ್ಲಿ ಈ ವಿ.ವಿ 20ನೇ ಸ್ಥಾನ ಪಡೆದಿದೆ.

ದಂತ ವೈದ್ಯಕೀಯ ಅಧ್ಯಯನಕ್ಕೆ ಸಂಬಂಧಿಸಿ, ಚೆನ್ನೈನ ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನಗಳ ಸಂಸ್ಥೆ(ಎಸ್‌ಐಎಂಟಿಎಸ್‌) 24ನೇ ಸ್ಥಾನ ಪಡೆದಿದೆ.

‘ಉನ್ನತ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದೇ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿ ಭಾರತ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಇನ್ನೊಂದೆಡೆ ಗುಣಮಟ್ಟದ ಶಿಕ್ಷಣಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ’ ಎಂದು ಕ್ಯೂಎಸ್‌ ಸಂಸ್ಥೆಯ ಸಿಇಒ ಜೆಸ್ಸಿಕಾ ಟರ್ನರ್‌ ಹೇಳಿದ್ದಾರೆ. 

‘ಕ್ಯೂಎಸ್‌’ ರ‍್ಯಾಂಕಿಂಗ್‌ ವರದಿಯ ಪ್ರಮುಖ ಅಂಶಗಳು

* ಭಾರತದ ಮೂರು ಖಾಸಗಿ ಉನ್ನತ ಸಂಸ್ಥೆಗಳಲ್ಲಿಮ ಕೆಲವು ಶೈಕ್ಷಣಿಕ ಕಾರ್ಯಕ್ರಮಗಳು ಈ ವರ್ಷ ಉತ್ತಮ ಪ್ರಗತಿ ದಾಖಲಿಸಿವೆ.

* ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜಗೇರಿಸುವಲ್ಲಿ, ಎಲ್ಲರಿಗೂ ಉನ್ನತ ಶಿಕ್ಷಣ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಿದೆ.

* ಡಿಜಿಟಲ್‌ ಸನ್ನದ್ಧತೆ ಹಾಗೂ ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆ ಬಗ್ಗೆಯೂ ಗಮನ ಅಗತ್ಯ

* ಸಂಶೋಧನೆಗೆ ಸಂಬಂಧಿಸಿ ಭಾರತವು ವಿಶ್ವದಲ್ಲಿಯೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. 2017ರಿಂದ 2022ರ ಅವಧಿಯಲ್ಲಿ ಸಂಶೋಧನೆ ಕ್ಷೇತ್ರದಲ್ಲಿನ ಬೆಳವಣಿಗೆ ಶೇ 54ರಷ್ಟು ಹೆಚ್ಚಳ ದಾಖಲಿಸಿದೆ

* ಸಂಶೋಧನಾ ವರದಿಗಳ ಪ್ರಕಟಣೆಗೆ ಸಂಬಂಧಿಸಿದಂತೆ, ಭಾರತವು ವಿಶ್ವದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. 2017ರಿಂದ 2022ರ ವರೆಗಿನ ಅವಧಿಯಲ್ಲಿ 13 ಲಕ್ಷ ಸಂಶೋಧನಾ ವರದಿಗಳು ಪ್ರಕಟವಾಗಿವೆ. ಚೀನಾ (45 ಲಕ್ಷ) ಹಾಗೂ ಅಮೆರಿಕ (44 ಲಕ್ಷ) ಮೊದಲ ಎರಡು ಸ್ಥಾನಗಳಲ್ಲಿವೆ.

-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.