ಬೆಂಗಳೂರು: ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ– ಬೆಂಗಳೂರು (ಐಐಎಂ–ಬಿ) ಇದೇ ಮೊದಲ ಬಾರಿಗೆ ಮೂರು ವರ್ಷಗಳ ಆನ್‌ಲೈನ್ ಪದವಿ ಕೋರ್ಸ್ ಅನ್ನು ಪರಿಚಯಿಸಲು ಸಜ್ಜಾಗಿದೆ.
ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಇನ್ ಡಿಜಿಟಲ್ ಬ್ಯುಸಿನೆಸ್ ಅಂಡ್ ಎಂಟರ್‌ಪ್ರೈನರ್‌ಶಿಪ್ (ಬಿಬಿಎ–ಡಿಬಿಇ) ಕೋರ್ಸ್ ಅನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲು ಐಐಎಂ–ಬಿ ಯೋಜಿಸಿದೆ. 1,000 ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಗುರಿಯನ್ನು ಹೊಂದಲಾಗಿದೆ. 12ನೇ ತರಗತಿಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದವರು ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹರು.
ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆಗಳಿಸುವ ಮೂಲಕ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಕೋರ್ಸ್‌ನ ಶುಲ್ಕ ₹ 4.5 ಲಕ್ಷ. ಈ ಕೋರ್ಸ್ ಇಂಟರ್ನ್‌ಶಿಪ್ ಅವಕಾಶವನ್ನು ಒಳಗೊಂಡಿದೆ.
ಈ ಕೋರ್ಸ್‌ನಡಿ ಪ್ರತಿ ವರ್ಷ 45 ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ. ಮೂರು ವರ್ಷದ ಈ ಕೋರ್ಸ್ ನಿರ್ಗಮನದ ಅವಕಾಶಗಳನ್ನು ಹೊಂದಿದ್ದು, ಮೊದಲ ವರ್ಷ ಪೂರೈಸಿದರೆ ಸರ್ಟಿಫಿಕೇಟ್, ಎರಡನೇ ವರ್ಷದ ಪೂರೈಸಿದರೆ ಡಿಪ್ಲೊಮಾ ಮತ್ತು ಮೂರನೇ ವರ್ಷ ಪೂರ್ಣಗೊಳಿಸಿದರೆ ಪದವಿ ನೀಡಲಾಗುತ್ತದೆ. ಈ ಕಾರ್ಯಕ್ರಮ ನಿರ್ವಹಣೆಗೆ 50 ಅಧ್ಯಾಪಕರನ್ನು ನಿಯೋಜಿಸಲಾಗುತ್ತದೆ. ಐಐಎಂ–ಬಿ ಈ ಕೋರ್ಸ್‌ಗೆ ಜೂನ್ 15ರೊಳಗೆ ಅರ್ಜಿಗಳನ್ನು ಆಹ್ವಾನಿಸಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಐಎಂ–ಬಿ ನಿರ್ದೇಶಕ ಪ್ರೊ. ಋಷಿಕೇಶ ಟಿ. ಕೃಷ್ಣನ್, ಪ್ರಮುಖವಾಗಿ ಪಿ.ಜಿ ಕೋರ್ಸ್‌ಗಳನ್ನು ಕೇಂದ್ರೀಕರಿಸಿರುವ ಸಂಸ್ಥೆಯು ಪದವಿ ಕೋರ್ಸ್‌ಗಳತ್ತಲೂ ತನ್ನ ದೃಷ್ಟಿ ಹರಿಸಿದೆ. ದೇಶಕ್ಕೆ ಅಗತ್ಯವಿರುವ ಕೌಶಲ ಹೊಂದಿದ ಉದ್ಯೋಗಿಗಳನ್ನು ಸೃಷ್ಟಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಉದ್ದೇಶ ಸಂಸ್ಥೆಯದ್ದಾಗಿದೆ ಎಂದರು.
‘ಆನ್‌ಲೈನ್ ಕೋರ್ಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವೇಶ ಒದಗಿಸಬಹುದು ಮತ್ತು ವೆಚ್ಚವೂ ಕಡಿಮೆಯಾಗಿ ಇರುತ್ತದೆ. ಒಂದು ಸಂಸ್ಥೆಯಾಗಿ 10 ವರ್ಷಗಳಿಂದ ನಾವು ಉತ್ತಮ ಗುಣಮಟ್ಟದ ಆನ್‌ಲೈನ್ ಶಿಕ್ಷಣ ನೀಡುತ್ತಿದ್ದೇವೆ. ಈಗ ಪೂರ್ಣ ಪ್ರಮಾಣದ ಕೋರ್ಸ್‌ಗಳನ್ನು ಪರಿಚಯಿಸಲು ಸಾಕಷ್ಟು ಪ್ರಬುದ್ಧರಾಗಿದ್ದೇವೆ’ ಎಂದು ಅವರು ವಿವರಿಸಿದರು.
‘ಏಕಕಾಲದಲ್ಲಿ ಇತರ ವಿಷಯಗಳಲ್ಲಿ ಪದವಿ ಮತ್ತು ಡಿಜಿಟಲ್ ಕೌಶಲ ಪಡೆಯ ಬಯಸುವವರಿಗೆ ಈ ಕೋರ್ಸ್ ಸೂಕ್ತ’ ಎಂದು ಕೃಷ್ಣನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.