ADVERTISEMENT

ರಾಮಾಯಣ ಅಣಕಿಸುವ ನಾಟಕ: ಐಐಟಿ ವಿದ್ಯಾರ್ಥಿಗಳಿಗೆ ₹1.2 ಲಕ್ಷ ದಂಡ

ಪಿಟಿಐ
Published 20 ಜೂನ್ 2024, 10:44 IST
Last Updated 20 ಜೂನ್ 2024, 10:44 IST
ಐಐಟಿ ಬಾಂಬೆ
ಐಐಟಿ ಬಾಂಬೆ   

ಮುಂಬೈ: ಇಲ್ಲಿನ ಪವಾಯಿಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ–ಬಾಂಬೆ (ಐಐಟಿ– ಬಾಂಬೆ) ವಿದ್ಯಾರ್ಥಿಗಳು ರಾಮಾಯಣವನ್ನು ಅಣಕಿಸುವ ನಾಟಕ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿದೆ. ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸಲಾಗಿದೆ.

ಐಐಟಿ–ಬಾಂಬೆಯ ಪ್ರದರ್ಶಕ ಕಲೆಗಳ ಉತ್ಸವದ ಅಂಗವಾಗಿ ಪ್ರದರ್ಶಿಸಿದ ‘ರಾಹೋವನ್‌’ ಹೆಸರಿನ ನಾಟಕವು ಹಿಂದೂಗಳ ಸಂಸ್ಕೃತಿಯನ್ನು ಅಣಕಿಸಿದೆಯಲ್ಲದೆ, ಅವರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.

ಇದೇ ವರ್ಷ ಮಾರ್ಚ್‌ 31ರಂದು ನಾಟಕ ಪ್ರದರ್ಶನ ನಡೆದಿದ್ದು, ಅದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ನಾಟಕವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಐಐಟಿ–ಬಾಂಬೆ ಶಿಸ್ತು ಸಮಿತಿಯು ಮೇ 8ರಂದು ಸಭೆ ಸೇರಿತ್ತು. ಆದರೆ, ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ತೀರ್ಮಾನವನ್ನು ಜೂನ್‌ 4ರಂದು ತೆಗೆದುಕೊಂಡಿದೆ. ದಂಡ ಪಾವತಿಸಲು ಜೂನ್‌ 30ರ ಗಡುವನ್ನೂ ವಿಧಿಸಿದೆ.

ADVERTISEMENT

ನಾಟಕದಲ್ಲಿ ಭಾಗಿಯಾದ ಕೆಲವು ವಿದ್ಯಾರ್ಥಿಗಳಿಗೆ ₹1.2 ಲಕ್ಷ ದಂಡ ಹಾಗೂ ಇನ್ನು ಕೆಲವರಿಗೆ ₹40 ಸಾವಿರ ದಂಡ ವಿಧಿಸಲಾಗಿದೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್‌ ಹೇಳಿದ್ದಾರೆ.

‘ರಾಮಾಯಣವನ್ನು ಕೆಟ್ಟದಾಗಿ ಚಿತ್ರಿಸಿದ ರಾಹೋವನ್ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ಈ ವಿದ್ಯಾರ್ಥಿಗಳು ಭಗವಾನ್ ರಾಮ, ಸೀತಾ ಮಾತೆ ಮತ್ತು ಭಗವಾನ್ ಲಕ್ಷ್ಮಣರನ್ನು ಅಪಹಾಸ್ಯ ಮಾಡಲು ತಮ್ಮ ಶೈಕ್ಷಣಿಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು @ಐಐಟಿಬಿ ಫಾರ್ ಭಾರತ್ ಎಂಬ ‘ಎಕ್ಸ್‌’ ಖಾತೆಯಲ್ಲಿ ಬರೆಯಲಾಗಿದೆ.

ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ವಕೀಲ ಶಶಾಂಕ್‌ ಶೇಖರ್‌ ಝಾ ಅವರು ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.