ಗುವಾಹಟಿ: ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ (ಐಎಸ್) ನಿಷ್ಠೆ ಹೊಂದಿದ್ದ ಗುವಾಹಟಿ ಐಐಟಿಯ ವಿದ್ಯಾರ್ಥಿಯೊಬ್ಬನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಭಾನುವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈವಿಕ ವಿಜ್ಞಾನ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿ, ದೆಹಲಿ ಮೂಲದ ತೌಸಿಫ್ ಅಲಿ ಫಾರೂಕಿ ಬಂಧಿತ. ಈತ ಐಎಸ್‌ಗೆ ಸೇರ್ಪಡೆಗೊಳ್ಳಲು ತೆರಳುತ್ತಿದ್ದಾಗ, ಕಾಮರೂಪ ಜಿಲ್ಲೆಯ ಹಜೋ ಬಳಿ ಶನಿವಾರ ಸಂಜೆ ವಶಕ್ಕೆ ಪಡೆಯಲಾಗಿತ್ತು.
‘ಫಾರೂಕಿಯನ್ನು ವಿಚಾರಣೆಗೊಳಪಡಿಸಿದಾಗ ಐಎಸ್‌ನೊಂದಿಗೆ ನಂಟು ಹೊಂದಿರುವುದು ಖಚಿತಪಟ್ಟಿತು. ಪೂರಕ ಸಾಕ್ಷ್ಯಗಳು ದೊರೆತ ನಂತರ ಬಂಧಿಸಲಾಗಿದೆ’ ಎಂದು ಅಸ್ಸಾಂನ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹಿರಿಯ ಅಧಿಕಾರಿ ಪಾರ್ಥಸಾರಥಿ ಮಹಾಂತ ಸುದ್ದಿಸಂಸ್ಥೆಗೆ ತಿಳಿಸಿದರು.
‘ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಐಐಟಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಆತ ಇದ್ದ ಕೊಠಡಿಯಲ್ಲೂ ಶೋಧ ನಡೆಸಿದ್ದೇವೆ’ ಎಂದು ಅವರು ಹೇಳಿದರು.
ಐಎಸ್‌ನ ಇಂಡಿಯಾದ ಮುಖ್ಯಸ್ಥ ಹಾಗೂ ಆತನ ಸಹಚರನನ್ನು ಬಂಧಿಸಿದ ಮೂರು ದಿನದ ನಂತರ ಮತ್ತೊಬ್ಬನ ಬಂಧನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.