ನವದೆಹಲಿ (ಪಿಟಿಐ): ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕರ್ನಾಟಕದ ಬೊಯಾ ಹರ್ಸೇನ್ ಸಾತ್ವಿಕ್ ಸೇರಿ ದೇಶದ 14 ವಿದ್ಯಾರ್ಥಿಗಳು ಶೇ 100 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
2022ರ ಸಾಲಿನ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಆವೃತ್ತಿಯ ಫಲಿತಾಂಶದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ನಾಲ್ವರು ತೆಲಂಗಾಣ ರಾಜ್ಯದವರಾದರೆ, ಮೂವರು ಆಂಧ್ರಪ್ರದೇಶದವರು. ಕರ್ನಾಟಕ, ಹರಿಯಾಣ, ಪಂಜಾಬ್, ಉತ್ತರಪ್ರದೇಶ, ಜಾರ್ಖಂಡ್, ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯಗಳಿಂದ ತಲಾ ಒಬ್ಬರು ಗರಿಷ್ಠ ಅಂಕ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.
8.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ 7.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕನ್ನಡ, ಹಿಂದಿ, ಬೆಂಗಾಳಿ, ಇಂಗ್ಲಿಷ್ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು.
ಶೇ 100 ಅಂಕ ಪಡೆದವರು: ಬೊಯಾ ಹರ್ಸೇನ್ ಸಾತ್ವಿಕ್ (ಕರ್ನಾಟಕ), ಜಸ್ತಿ ಯಶವಂತ ವಿ.ವಿ.ಎಸ್., ರೂಪೇಶ್ ಬಿಯಾನಿ, ಅನಿಕೇತ್ ಚಟ್ಟೋಪಾಧ್ಯಾಯ, ಧೀರಜ್ ಕುರುಕುಂದ (ತೆಲಂಗಾಣ),ಕೋಯಾಯಾನ ಸುಹಾಸ್, ಪೆನಿಕಲ್‌ಪತಿ ರವಿ ಕಿಶೋರ್, ಪಾಲಿಸೆಟ್ಟಿ ಕಾರ್ತೀಕೆಯ (ಆಂಧ್ರಪ್ರದೇಶ), ಸಾರ್ಥಕ್ ಮಹೇಶ್ವರಿ (ಹರಿಯಾಣ), ಕುಶಾಗ್ರ ಶ್ರೀವಾಸ್ತವ (ಜಾರ್ಖಂಡ್), ಮೃಣಾಲ್ ಗರ್ಗ್ (ಪಂಜಾಬ್), ಸ್ನೇಹಾ ಪಾರೀಕ್ (ಅಸ್ಸಾಂ), ನವ್ಯಾ (ರಾಜಸ್ಥಾನ), ಸುಮಿತ್ರಾ ಗರ್ಗ್ (ಉತ್ತರಪ್ರದೇಶ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.