ADVERTISEMENT

ನಿಖರ ಭ್ರೂಣ ವಯಸ್ಸು ಪತ್ತೆಗೆ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿ

ಪಿಟಿಐ
Published 26 ಫೆಬ್ರುವರಿ 2024, 14:32 IST
Last Updated 26 ಫೆಬ್ರುವರಿ 2024, 14:32 IST
..
..   

ನವದೆಹಲಿ: ಗರ್ಭಿಣಿಯ ಭ್ರೂಣದ ವಯಸ್ಸನ್ನು ನಿಖರವಾಗಿ ತಿಳಿಸುವ ಕೃತಕ ಬುದ್ಧಿಮತ್ತೆಯ (ಎಐ) ಮಾದರಿಯೊಂದನ್ನು ಮದ್ರಾಸ್ ಐಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಗರ್ಭಿಣಿಯರ ಬಗ್ಗೆ ಸೂಕ್ತ ಜಾಗ್ರತೆ ವಹಿಸಲು ಮತ್ತು ಪ್ರಸವದ ಖಚಿತ ದಿನಾಂಕ ತಿಳಿಯಲು ನಿಖರ ಗರ್ಭಾವಸ್ಥೆಯ ವಯಸ್ಸು (ಜಿಎ) ಅಗತ್ಯವಾಗಿರುತ್ತದೆ.

ಇದನ್ನು ‘ಗರ್ಭಿಣಿ– ಜಿಎ2’ ಎಂದು ಕರೆಯಲಾಗಿದ್ದು, ಭಾರತದ ಜನಸಂಖ್ಯೆಯ ದತ್ತಾಂಶ ಆಧರಿಸಿ ರೂಪಿಸಲಾಗಿದೆ. ಜತೆಗೆ, ಇದು ನಿರ್ದಿಷ್ಟವಾಗಿ ಭಾರತ ಕೇಂದ್ರೀತ ವ್ಯವಸ್ಥೆಯಾಗಿದೆ. ಇಲ್ಲಿಯವರೆಗೆ ಭ್ರೂಣದ ವಯಸ್ಸನ್ನು ಪಾಶ್ಚಿಮಾತ್ಯ ಜನಸಂಖ್ಯೆ ಆಧಾರಿತ ಸೂತ್ರಗಳನ್ನು ಬಳಸಿ ಪತ್ತೆ ಹಚ್ಚಲಾಗುತ್ತಿತ್ತು. ಭಾರತದ ಮಹಿಳೆಯರಿಗೆ ಅದನ್ನು ಅನ್ವಯಿಸಿದಾಗ ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಭ್ರೂಣದ ಬೆಳವಣಿಗೆಯಲ್ಲಿನ ಕೆಲವು ಬದಲಾವಣೆಗಳಿಂದ ಫಲಿತಾಂಶದಲ್ಲಿ ಲೋಪಗಳು ಕಂಡುಬರುತ್ತಿದ್ದವು.             

ADVERTISEMENT

ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ‘ಗರ್ಭಿಣಿ–ಜಿಎ2’ ಲೋಪಗಳನ್ನು ಮೂರು ಪಟ್ಟು ಕಡಿಮೆ ಮಾಡುವ ಮೂಲಕ ಭಾರತದ ಮಹಿಳೆಯರಲ್ಲಿ ಭ್ರೂಣದ ವಯಸ್ಸನ್ನು ನಿಖರವಾಗಿ ಅಂದಾಜಿಸುತ್ತದೆ. ಈ ಜಿಎ ಮಾದರಿಯು ಪ್ರಸೂತಿ ತಜ್ಞರು ಮತ್ತು ನವಜಾತ ಶಿಶು ತಜ್ಞರ ಚಿಕಿತ್ಸೆಗೆ ನೆರವಾಗುವ ಮೂಲಕ ಭಾರತದಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.                 

‘ಗರ್ಭ್–ಇಣಿ’ ಇದು ಮದ್ರಾಸ್ ಐಐಟಿಯ ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ) ಪ್ರಮುಖ ಯೋಜನೆಯಾಗಿದೆ. ದೇಶದಾದ್ಯಂತ ಈ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ ಎಂದು ಡಿಬಿಟಿ ಕಾರ್ಯದರ್ಶಿ ರಾಜೇಶ್ ಗೋಖಲೆ ತಿಳಿಸಿದ್ದಾರೆ. 

ಸಂಶೋಧನೆಯ ಫಲಿತಾಂಶವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಆರೋಗ್ಯ ಪತ್ರಿಕೆ ‘ಲ್ಯಾನ್ಸೆಟ್‌ ಆಗ್ನೇಯ ಏಷ್ಯಾ ಪ್ರಾದೇಶಿಕ ಆರೋಗ್ಯ’ದಲ್ಲಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.