ನವದೆಹಲಿ: ಮದ್ರಾಸ್ ಐಐಟಿಯು ಸತತ ನಾಲ್ಕನೇ ಬಾರಿ ದೇಶದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಶುಕ್ರವಾರ 2022ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ರ‍್ಯಾಂಕಿಂಗ್ ಅನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ಐಐಎಸ್‌ಸಿ ಅತ್ಯುನ್ನತ ಸಂಶೋಧನಾ ಸಂಸ್ಥೆಯ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದೆ. ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್ ಪಡೆದಿವೆ. 2021ರ ಸಾಲಿನಲ್ಲಿ ಇದೇ ವರ್ಗದಲ್ಲಿ ಮೂರನೇ ರ‍್ಯಾಂಕ್‌ನಲ್ಲಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲಯವು, ಈ ಸಾಲಿನಲ್ಲಿ ಆರನೇ ರ‍್ಯಾಂಕ್‌ಗೆ ಕುಸಿದಿದೆ.
ಮುಂದಿನ ಸಾಲಿನಿಂದ ಆವಿಷ್ಕಾರ ಮತ್ತು ಉದ್ಯಮಶೀಲತೆ ವಿಭಾಗದಲ್ಲಿ ಕೂಡ ಶ್ರೇಯಾಂಕ ನೀಡಲಾಗುವುದು. ಶಾಲೆಗಳಿಗೆ ಕೂಡ ಶ್ರೇಯಾಂಕ ನೀಡುವ ಪದ್ಧತಿಯನ್ನು ಸದ್ಯವೇ ಆರಂಭಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.