ನವದೆಹಲಿ: ಕಾರನ್ನು ಚಲಾಯಿಸುವಾಗ ಸೂರ್ಯ ಪ್ರಖರ ಬೆಳಕು ಚಾಲಕನ ಕಣ್ಣಿಗೆ ರಾಚುವುದನ್ನು ಸ್ವಯಂಚಾಲಿತವಾಗಿ ತಡೆಯುವ ‘ಸ್ಮಾರ್ಟ್ ವೈಸರ್’ ಅನ್ನು ಗಾಂಧಿನಗರದ ಐಐಟಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಗಾಂಧಿನಗರ ಐಐಟಿಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಈ ವೈಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೈಸರ್‌ಗೆ ಬೌದ್ಧಿಕ ಆಸ್ತಿ ಹಕ್ಕು (ಪೇಟೆಂಟ್) ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
‘ಸ್ಮಾರ್ಟ್ ವೈಸರ್’ ಅನ್ನು ಕಾರಿನ ಡ್ಯಾಶ್‌ಬೋರ್ಡ್‌ನ ಮೇಲೆ ಅಳವಡಿಸಲಾಗುತ್ತದೆ.ಈ ವೈಸರ್‌ನಲ್ಲಿ ಸಂವೇದಕ, ನಿಯಂತ್ರಕ ಮತ್ತು ಒಂದು ಮೋಟರ್ ಇರಲಿದೆ. ಇವೆಲ್ಲಾ ಕಾರ್ಯನಿರ್ವಹಿಸಲು ಯುಎಸ್‌ಬಿ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಜತೆಗೆ ಮಡಚಿಕೊಳ್ಳುವಂತಹ ಪಾರದರ್ಶಕ ಪರದೆಯನ್ನು ಇದು ಹೊಂದಿರಲಿದೆ.
ಈ ಸಾಧನದಲ್ಲಿರುವ ಸಂವೇದಕವು ಸೂರ್ಯನ ಬೆಳಕು ಮತ್ತು ಉಷ್ಣತೆಯನ್ನು ಗ್ರಹಿಸುತ್ತದೆ. ಸೂರ್ಯನ ಬೆಳಕು ಪ್ರಖರವಾಗಿದ್ದಲ್ಲಿ, ಪರದೆ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದೆ. ಆಗ ಚಾಲಕನ ಕಣ್ಣಿಗೆ ಬೆಳಕು ರಾಚುವುದು ತಪ್ಪುತ್ತದೆ. ಬೆಳಕಿನ ಪ್ರಖರತೆ ಕಡಿಮೆಯಾದಂತೆ ಪರದೆ ತನ್ನಿಂದ ತಾನೇ ಮಡಚಿಕೊಳ್ಳಲಿದೆ. ಕಾರಿನ ಎಂಜಿನ್ ಅನ್ನು ಬಂದ್ ಮಾಡಿದ ತಕ್ಷಣ ಪರದೆ ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳಲಿದೆ.
ಈ ಸಾಧನವನ್ನು ಒಮ್ಮೆ ಅಳವಡಿಸಿದರೆ ಸಾಕು, ಅದರ ಸ್ಥಾನವನ್ನು ಬದಲಿಸಬೇಕಿಲ್ಲ. ಆದರೆ ಅಳವಡಿಸುವ ಮುನ್ನ ಚಾಲಕ ಅದನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು ಅಷ್ಟೆ.
ಬೆಳಕಿನ ಪ್ರಖರತೆಯನ್ನು ತಪ್ಪಿಸಲು ತಂಪು ಕನ್ನಡಕ ಬಳಸಬಹುದು. ಆದರೆ ಅದರಿಂದ ಚಾಲಕನಿಗೆ ಎಲ್ಲವೂ ಮಂಕಾಗಿಯೇ ಕಾಣುತ್ತದೆ. ಇದರಿಂದ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಆದರೆ ‘ಸ್ಮಾರ್ಟ್ ವೈಸರ್’ ಚಾಲಕನ ಕಣ್ಣಿಗೆ ಬೆಳಕು ರಾಚುವುದನ್ನಷ್ಟೇ ತಪ್ಪಿಸುತ್ತದೆ. ಉಳಿದ ಎಲ್ಲವೂ ಯಥಾವತ್ ಆಗಿ ಕಾಣಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳಾದಸೌರಿತ್ರಾ ಗರಾಯ್ ಮತ್ತು ಜಯ್ ಶಾ.
ಗಾಂಧಿನಗರದ ಐಐಟಿಯು ಪ್ರತಿವರ್ಷ ‘Invent@IITGN’ ಎಂಬ ಕಾರ್ಯಕ್ರಮವನ್ನು ನಡೆಸುತ್ತದೆ. ಇಲ್ಲಿ ವಿದ್ಯಾರ್ಥಿಗಳು ಹೊಸ ಸಲಕರಣೆ/ಸಾಧನಗಳನ್ನು ಸೀಮಿತ ಅವಧಿಯಲ್ಲಿ ಅಭಿವೃದ್ಧಿಪಡಿಸಬೇಕು. ದೇಶದ ಎಲ್ಲಾ ಐಐಟಿಗಳ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಬಹುದು. ‘ಸ್ಮಾರ್ಟ್ ವೈಸರ್’ ಅನ್ನು ಇದೇ ಕಾರ್ಯಕ್ರಮದ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.