ಮುಂಬೈ: ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯಲ್ಲಿ (ಐಐಟಿಬಿ) ಉಪನ್ಯಾಸ ಅಥವಾ ಭಾಷಣಕ್ಕೆ ಹೊರಗಿನಿಂದ ಅತಿಥಿಗಳನ್ನು ಆಹ್ವಾನಿಸಲು ಮತ್ತು ಸಾಕ್ಷ್ಯಚಿತ್ರ, ಸಿನಿಮಾಗಳನ್ನು ಪ್ರದರ್ಶಿಸುವ ಮೊದಲು ಅದು ‘ರಾಜಕೀಯ, ವಿವಾದಾತ್ಮಕ’ ವಿಷಯಗಳಿಂದ ಮುಕ್ತವಾಗಿರಿಸುವ ಸಲುವಾಗಿ ಅಗತ್ಯ ಪೂರ್ವಾನುಮತಿ ಪಡೆಯುವಂತೆ ತನ್ನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸೂಚಿಸಿದೆ.
ಆದರೆ, ಉಪನ್ಯಾಸದ ವಿಷಯವು ಸಂಪೂರ್ಣ ರಾಜಕೀಯೇತರವಾಗಿದ್ದರೆ ಅದಕ್ಕೆ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ಸಂಸ್ಥೆಯು ಎರಡು ದಿನಗಳ ಹಿಂದೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಇಸ್ರೇಲ್ ವಿರುದ್ಧ ಪ್ಯಾಲೆಸ್ಟೀನ್ ಸ್ವಾತಂತ್ರ್ಯ ಹೋರಾಟದ ಕುರಿತು ಉಪನ್ಯಾಸ ನೀಡುವಾಗ ಭಯೋತ್ಪಾದನೆ ವೈಭವೀಕರಿಸಿದ ಆರೋಪದ ಮೇಲೆ ಅತಿಥಿ ಉಪನ್ಯಾಸಕರ ವಿರುದ್ಧ ಐಐಟಿಬಿ ಕ್ಯಾಂಪಸ್‌ನ ಹೊರಗೆ ಪ್ರತಿಭಟನೆ ನಡೆದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ನ.14 ರಂದು ಹೊರಡಿಸಿರುವ ‘ಐಐಟಿ ಬಾಂಬೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಮಧ್ಯಂತರ ಮಾರ್ಗಸೂಚಿಗಳು’ ಅಡಿಯಲ್ಲಿ ಹೊರಗಿನ ಅತಿಥಿ ಭಾಷಣಕಾರರನ್ನು ಒಳಗೊಂಡಿರುವ ಕಾರ್ಯಕ್ರಮಗಳು ಅಥವಾ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳ ಪ್ರದರ್ಶನಗಳಿಗೆ ಡೀನ್ ಅನುಮೋದನೆ ನೀಡುವ ಮೊದಲು, ಸಂಸ್ಥೆಯ ನಿರ್ದೇಶಕರು ನೇಮಕ ಮಾಡಿದ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕಿದೆ.
ಎಡಪಂಥೀಯ ವಿದ್ಯಾರ್ಥಿಗಳ ಸಂಘಟನೆ ‘ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್’ ಈ ಮಾರ್ಗಸೂಚಿಗಳ ಪ್ರತಿಯನ್ನು ಸಾಮಾಜಿಕ ಮಾಧ್ಯಮ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಇದೊಂದು ದಮನಕಾರಿ ಆದೇಶ ಎಂದು ಕಿಡಿಕಾರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.