ADVERTISEMENT

ಪ್ರಕರಣದಿಂದ ಹಿಂದೆ ಸರಿದ ಸುರೇಂದ್ರನ್: ಮಂಜೇಶ್ವರದಲ್ಲಿ ನಡೆಯಲಿದೆ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 14:31 IST
Last Updated 25 ಫೆಬ್ರುವರಿ 2019, 14:31 IST
   

ಕೊಚ್ಚಿ: ಮಂಜೇಶ್ವರ ವಿಧಾನ ಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣವನ್ನು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಕೆ. ಸುರೇಂದ್ರನ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.ಇದಕ್ಕಾಗಿ ಸುರೇಂದ್ರನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ.

ಸುರೇಂದ್ರನ್ ಈ ಪ್ರಕರಣ ಹಿಂಪಡೆಯುತ್ತಿರುವುದರಿಂದ ಲೋಕಸಭಾ ಚುನಾವಣೆ ಜತೆಗೆ ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಮತ್ತು ಸಿಪಿಎಂ ಅಕ್ರಮ ಮತದಾನ ನಡೆಸಿದೆ ಎಂದು ಸುರೇಂದ್ರನ್ ಕೋರ್ಟ್ ಮೆಟ್ಟಿಲು ಹತ್ತಿದ್ದರು.

ADVERTISEMENT

2016ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಜಾಕ್ ಅವರ ವಿರುದ್ಧ ಸ್ಪರ್ಧಿಸಿದ್ದ ಸುರೇಂದ್ರನ್ 89 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಮತದಾನದಲ್ಲಿ ಅಕ್ರಮ ನಡೆದಿದೆ. ಲೀಗ್ ಮತ್ತು ಸಿಪಿಎಂ ಕಳ್ಳಮತಗಳನ್ನು ಚಲಾಯಿಸಿ ಯುಡಿಎಫ್ ಗೆಲ್ಲುವಂತೆ ಮಾಡಿದ್ದಾರೆ. ಹಾಗಾಗಿತನ್ನನ್ನು ವಿಜಯಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಸುರೇಂದ್ರನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಅಬ್ದುಲ್ ರಜಾಕ್ ಮೃತರಾಗಿದ್ದರು.ಆದರೂ ಸುರೇಂದ್ರನ್ ಕೇಸ್ ವಾಪಸ್ ಪಡೆಯಲು ಮುಂದಾಗಿರಲಿಲ್ಲ.

ಏತನ್ಮಧ್ಯೆ, ಮುಂಬರುವಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುರೇಂದ್ರನ್ ಹೆಸರು ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಹಿಂಪಡೆಯಲು ಸುರೇಂದ್ರನ್ ತೀರ್ಮಾನಿಸಿದರು ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.