ADVERTISEMENT

ಅಡಿಕೆ ಅಕ್ರಮ ಆಮದು ಹೆಚ್ಚಳ: ಮೂರೇ ತಿಂಗಳಲ್ಲಿ 3,009 ಟನ್‌ ವಶ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:18 IST
Last Updated 27 ಜುಲೈ 2024, 15:18 IST
<div class="paragraphs"><p>ಅಡಿಕೆ </p></div>

ಅಡಿಕೆ

   

ನವದೆಹಲಿ: 2024-25ನೇ ಹಣಕಾಸು ವರ್ಷದ ಜೂನ್‌ ಅಂತ್ಯದವರೆಗೆ ಅಡಿಕೆ ಅಕ್ರಮ ಆಮದಿನ 84 ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಅಡಿಕೆ ಅಕ್ರಮ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ ತಿಳಿಸಿದ್ದಾರೆ. 

ರಾಜ್ಯಸಭೆಯಲ್ಲಿ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. 

ADVERTISEMENT

‘ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿಯ ತನಿಖಾ ತಂಡವು 2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿತ್ತು. 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್‌, 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಹಾಗೂ 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್‌ ಅಡಿಕೆ ವಶಪಡಿಸಿಕೊಂಡಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ. 

ತನಿಖಾ ತಂಡವು ವಿಮಾನ ನಿಲ್ದಾಣಗಳಲ್ಲಿ 2021–22ರಲ್ಲಿ 4 ಪ್ರಕರಣ ಪತ್ತೆ ಹಚ್ಚಿ 15,296 ಕೆ.ಜಿ, 2022–23ರಲ್ಲಿ 12 ಪ್ರಕರಣಗಳಲ್ಲಿ 14,188 ಕೆ.ಜಿ, 2023–24ರಲ್ಲಿ 3 ಪ್ರಕರಣಗಳಲ್ಲಿ 2,116 ಕೆ.ಜಿ, 2024–25ರಲ್ಲಿ ಜೂನ್‌ ವರೆಗೆ 3 ಪ್ರಕರಣಗಳಲ್ಲಿ 10,000 ಕೆ.ಜಿ ಅಡಿಕೆ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. 

’ತನಿಖಾ ತಂಡವು ಅಡಿಕೆಯ ಅಕ್ರಮ ಸಾಗಣೆ ಮೇಲೆ ನಿಗಾ ಇಟ್ಟಿದೆ. ದೇಶದ ರೈತರ ಹಿತ ರಕ್ಷಿಸಲು ಬದ್ಧವಾಗಿದೆ’ ಎಂದು ಅವರು ತಿಳಿಸಿದ್ದಾರೆ.  

‘ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು,  ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ₹251ಯಿಂದ ₹351ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಶೇ 100 ಅಡಿಕೆ ಆಮದು ಸುಂಕ ವಿಧಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.