ನವದೆಹಲಿ: ವೈದ್ಯರ ಮೇಲಿನ ಹಲ್ಲೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ಇದೇ 18ರಂದು ‘ರಕ್ಷಕರನ್ನು ಉಳಿಸಿ’ ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ.
ಆರೋಗ್ಯ ಕ್ಷೇತ್ರದ ವೃತ್ತಿಪರರನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸಾಚಾರದ ವಿರುದ್ಧ ಕಪ್ಪು ಪಟ್ಟಿ, ಮಾಸ್ಕ್, ರಿಬ್ಬನ್, ಶರ್ಟ್ ಧರಿಸಿ ಮತ್ತು ಜಾಗೃತಿ ಅಭಿಯಾನ ಮೂಡಿಸುವ ಮೂಲಕ ಪ್ರತಿಭಟನೆ ನಡೆಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘವು ತನ್ನ ಎಲ್ಲ ರಾಜ್ಯ ಮತ್ತು ಸ್ಥಳೀಯ ಶಾಖೆಗಳಿಗೆ ಸೂಚನೆ ನೀಡಿದೆ.
ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಇತರ ಸ್ಥಳಗಳಲ್ಲಿ ಕಳೆದ ಎರಡು ವಾರಗಳಲ್ಲಿ ವೈದ್ಯರ ಮೇಲೆ ನಡೆದ ಸರಣಿ ಹಿಂಸಾಚಾರಗಳು ಅತ್ಯಂತ ಘಾಸಿಗೊಳಿಸುವಂತದ್ದು ಎಂದು ಐಎಂಎ ಹೇಳಿದೆ.
ಐಎಂಎಯ ಕ್ರಿಯಾ ಸಮಿತಿಯು, ವೈದ್ಯಕೀಯ ವೃತ್ತಿಯ ಮೇಲೆ ಮತ್ತು ವೃತ್ತಿಪರರ ಮೇಲಿನ ಆಕ್ರಮಣ ನಿಲ್ಲಿಸುವ ಬೇಡಿಕೆಯೊಂದಿಗೆ ‘ರಕ್ಷಕರನ್ನು ರಕ್ಷಿಸಿ’ ಘೋಷಣೆ ಹಾಕಲು ನಿರ್ಧರಿಸಿದೆ. ಅಲ್ಲದೇ ವೈದ್ಯರು ತಮ್ಮ ಕಾಳಜಿ, ಆಕ್ರೋಶ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಲು ಜೂನ್ 18ರಂದು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸಲು ನಿರ್ಧರಿಸಿದೆ ಎಂದು ಅದು ತಿಳಿಸಿದೆ.
ಅಲ್ಲದೇ ಜೂನ್ 15 ಅನ್ನು ರಾಷ್ಟ್ರೀಯ ಬೇಡಿಕೆಯ ದಿನವಾಗಿ ಆಚರಿಸಲಾಗುವುದು ಮತ್ತು ಅಂದು ದೇಶದಾದ್ಯಂತ ಐಎಂಎ ಶಾಖೆಗಳಿಂದ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.