ತಿರುವನಂತಪುರ: ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಕೇರಳದ ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಈ ಎರಡು ಜಿಲ್ಲೆಗಳಿಗೆ ಈಗಾಗಲೇ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಮಳೆ ಅಬ್ಬರಿಸುವ ಮುನ್ಸೂಚನೆಯ ಕಾರಣ ರೆಡ್ ಅಲರ್ಟ್ ನೀಡಲಾಗಿದೆ.
ಇನ್ನುಳಿದಂತೆ ತಿರುವನಂತಪುರ, ಕೊಲ್ಲಂ, ಆಳಪ್ಪುಳ, ಕೊಟ್ಟಾಯಂ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ, ಕೋಯಿಕ್ಕೊಡ್ ಮತ್ತು ವಯನಾಡಿಗೆ ಆರಂಜ್ ಅಲರ್ಟ್ ನೀಡಲಾಗಿದ್ದು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆ ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
24 ಗಂಟೆಯ ಅವಧಿಯಲ್ಲಿ 20 ಸೆಂ.ಮೀ.ಗಿಂತ ಹೆಚ್ಚು ಮಳೆಯಾದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ. 11 –20 ಸೆಂ.ಮೀ. ಮಳೆಯಾದರೆ ಆರೆಂಜ್ ಅಲರ್ಟ್ ಮತ್ತು 6–11 ಸೆಂ.ಮೀ. ಮಳೆಯಾದರೆ ಯೆಲ್ಲೊ ಅಲರ್ಟ್ ಎಂದು ಸೂಚನೆ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.