ಲಖನೌ: ‘ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಅನುಷ್ಠಾನಕ್ಕೆ ಹರಿಯಾಣದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದು ದಲಿತರನ್ನು ವಿಭಜಿಸುವ ಹುನ್ನಾರವಾಗಿದೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪಿನಂತೆಯೇ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹರಿಯಾಣದ ನೂತನ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.
‘ಹರಿಯಾಣ ಸರ್ಕಾರವು ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಗೆ ಹೊಸ ವ್ಯವಸ್ಥೆ ಕಲ್ಪಿಸುತ್ತಿರುವುದು ಮೀಸಲಾತಿ ಆದೇಶ ವಿರೋಧಿ ಹಾಗೂ ದಲಿತರನ್ನು ವಿಭಜಿಸುವ ತಂತ್ರವಾಗಿದೆ. ಒಳಮೀಸಲಾತಿ ವಿಷಯವಾಗಿ ದಲಿತರು ತಮ್ಮೊಳಗೇ ಬಡಿದಾಡಿಕೊಳ್ಳುವಂತೆ ಮಾಡಲು ನಡೆಸಿದ ಹುನ್ನಾರವಾಗಿದೆ’ ಎಂದಿದ್ದಾರೆ.
‘ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ವಿಫಲವಾಗಿದೆ. ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಂತೆ ಮಾಡುವ ಮೂಲಕ ಅಂತಿಮವಾಗಿ ಅದನ್ನು ತೆಗೆದುಹಾಕುವ ಗುಪ್ತ ಕಾರ್ಯಸೂಚಿಯ ಜಾರಿಗೆ ಅದು ಸಿದ್ಧತೆ ನಡೆಸಿದೆ. ಇದು ತೀರಾ ಅನ್ಯಾಯವಾಗಿದ್ದು, ಬಿಎಸ್‌ಪಿ ಇದನ್ನು ಬಲವಾಗಿ ಖಂಡಿಸುತ್ತದೆ’ ಎಂದು ಮಾಯಾವತಿ ಪ್ರತಿಭಟಿಸಿದ್ದಾರೆ.
‘ಜಾತಿವಾದಿ ಪಕ್ಷಗಳು ಸೇರಿಕೊಂಡು ಜಾರಿಗೊಳಿಸಲು ಯತ್ನಿಸುತ್ತಿರುವ ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಸಮರ್ಥವಾಗಿ ಎದುರಿಸಲು ಬಿಎಸ್‌ಪಿ ಬದ್ಧವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಹಾಗೂ ಅವರನ್ನು ಆಡಳಿತವರ್ಗಕ್ಕೆ ಏರಿಸುವ ಹೋರಾಟವನ್ನು ನಮ್ಮ ಪಕ್ಷ ಪ್ರಾಮಾಣಿಕವಾಗಿ ಮುಂದುವರಿಸಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.