ಕೊಲಂಬೊ: ‘ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಭಾರತ– ಶ್ರೀಲಂಕಾ ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಪರಸ್ಪರ ಲಾಭ, ತಿಳಿವಳಿಕೆ ಮತ್ತು ಉತ್ತಮ ನೆರೆಹೊರೆಯ ಸಂಬಂಧ ಹೊಂದುವುದು ಅಗತ್ಯವಾಗಿದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಹೇಳಿದ್ದಾರೆ.
ಶ್ರೀಲಂಕಾದ ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಭಾರತೀಯ ಅಭಿವೃದ್ಧಿ ಸಹಕಾರ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್– 19 ಸಾಂಕ್ರಾಮಿಕ ರೋಗದ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳು ತಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಅಡೆತಡೆಗಳನ್ನು ಕಂಡಿವೆ ಎಂದರು.
‘ಎರಡೂ ದೇಶಗಳು ತ್ವರಿತ ಸಾಮಾಜಿಕ– ಆರ್ಥಿಕ ಚೇತರಿಕೆಯನ್ನು ಬಯಸುತ್ತಿರುವ ಸಂದರ್ಭದಲ್ಲಿ ಇಬ್ಬರೂ ಜತೆಯಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. ಆ ಮೂಲಕ ನಮ್ಮ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವುದು ಹಾಗೂ ಕಾಲಕ್ಕೆ ತಕ್ಕಂತೆ ನಮ್ಮ ದ್ವಿಪಕ್ಷೀಯ ಒಪ್ಪಂದವನ್ನು ಬಲಪಡಿಸುವುದು ಮುಖ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಮ್ಮ ಸಾಮಾಜಿಕ– ಆರ್ಥಿಕ ಒಪ್ಪಂದದ ಪ್ರಕಾರ ಕೋವಿಡ್–19 ನಿರ್ಬಂಧಗಳ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಯಾವುದೇ ರೀತಿಯಲ್ಲೂ ನಾವು ಹಿಂಜರಿಯುವುದಿಲ್ಲ. ಕೋವಿಡ್ ನಂತರ ಚೇತರಿಕೆಯ ಸಂದರ್ಭದಲ್ಲಿ ಶ್ರೀಲಂಕಾ ಸರ್ಕಾರದ ಪ್ರಯತ್ನಗಳಿಗೆ ಭಾರತವು ಜೊತೆಯಾಗಿ ನಿಲ್ಲಲಿದೆ’ ಎಂದು ಶ್ರಿಂಗ್ಲಾ ಹೇಳಿದರು.
ಹರ್ಷವರ್ಧನ್ ಶ್ರಿಂಗ್ಲಾ ಅವರು ನಾಲ್ಕು ದಿನಗಳ ಭೇಟಿಗಾಗಿ ಶನಿವಾರ ಶ್ರೀಲಂಕಾಕ್ಕೆ ತೆರಳಿದ್ದಾರೆ. ‘ಶ್ರೀಲಂಕಾದ ರಾಮಾಯಣ ಸರ್ಕ್ಯೂಟ್‌ಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಭಾರತವು ನೆರವಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.