ನವದೆಹಲಿ: ಕೋವಿಡ್–19 ಪಿಡುಗಿನಿಂದ ದೇಶ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನ ಮಂತ್ರಿಗಳ ಕಚೇರಿ ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಪಿಡುಗಿನ ನಿರ್ವಹಣೆಗಾಗಿ ಸಾಂಘಿಕ ಮತ್ತು ಒಮ್ಮತದ ಮಾರ್ಗ ಅನುಸರಿಸುವುದು ಅಗತ್ಯ ಎಂದು ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಈ ಪಿಡುಗನ್ನು ಸಮರ್ಥವಾಗಿ ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
‘ಕೋವಿಡ್ ಪಿಡುಗು ನಿರ್ವಹಣೆಗೆ ಸಂಬಂಧಿಸಿ ತಜ್ಞರು ಹಾಗೂ ಹೋರಾಟಗಾರರು ನೀಡಿದ್ದ ಸಲಹೆ–ಶಿಫಾರಸುಗಳನ್ನು ಮೋದಿ ಕಡೆಗಣಿಸಿದರು’ ಎಂದೂ ಟೀಕಿಸಿದ್ದಾರೆ.
‘ಲಸಿಕೆ ಕಾರ್ಯಕ್ರಮಕ್ಕೆ ಕೇಂದ್ರದ ಬಜೆಟ್‌ನಲ್ಲಿ ₹ 35,000 ಕೋಟಿ ತೆಗೆದಿರಿಸಲಾಗಿದೆ. ಇದನ್ನು ಬಳಕೆ ಮಾಡಬೇಕು. ದೇಶದ ಜನರಿಗೆ ಲಸಿಕೆ ನೀಡುವ ತನ್ನ ನೈತಿಕ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಬಾರದು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ಲಸಿಕೆಯ ಉತ್ಪಾದನೆಗೆ ಚುರುಕು ನೀಡಲು ಹಕ್ಕುಸ್ವಾಮ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು, ಲಸಿಕೆ ಖರೀದಿ, ಆಂಬುಲೆನ್ಸ್, ಪಿಪಿಇ ಕಿಟ್, ಸ್ಯಾನಿಟೈಜರ್, ಆಮ್ಲಜನಕ ಹಾಗೂ ವೆಂಟಿಲೇಟರ್‌ಗಳ ಮೆಲಿನ ಜಿಎಸ್‌ಟಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೂ ಪ್ರತ್ಯೇಕ ಪತ್ರ ಬರೆದಿರುವ ಖರ್ಗೆ, ‘ಜನರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸಂಸತ್ ಮೂಕ ಪ್ರೇಕ್ಷಕನಂತೆ ಸುಮ್ಮನಿರಲು ಸಾಧ್ಯವಿಲ್ಲ. ದೇಶ ಎದುರಿಸುತ್ತಿರುವ ಪರಿಸ್ಥಿತಿ ಕುರಿತು ಚರ್ಚಿಸಲುವರ್ಚುವಲ್ ವಿಧಾನದ ಮೂಲಕ ಸಂಸತ್‌ನ ಸ್ಥಾಯಿ ಸಮಿತಿಗಳ ಸಭೆ ನಡೆಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್‌ನ ಸಂಸದೀಯ ಪಕ್ಷದ ಸಭೆ ಶುಕ್ರವಾರ ನಡೆದಿತ್ತು. ಕೋವಿಡ್–19 ನಿರ್ವಹಣೆ ಕುರಿತಂತೆ ಮೋದಿ ಹಾಗೂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆಯುವಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಂದಿನ ಸಭೆಯಲ್ಲಿ ಖರ್ಗೆ ಅವರಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.