ADVERTISEMENT

ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ ಪಾಕ್‌ ಪ್ರಧಾನಿಯ ಪಕ್ಷ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 9:50 IST
Last Updated 28 ಫೆಬ್ರುವರಿ 2019, 9:50 IST
   

ಬೆಂಗಳೂರು: ಪಾಕ್ ಮೇಲೆ ಭಾರತೀಯ ವಾಯುಪಡೆ ನಡೆಸಿದದಾಳಿಯಿಂದ ಬಿಜೆಪಿಗೆ ಆಗಲಿರುವ ರಾಜಕೀಯ ಲಾಭಗಳ ಕುರಿತುಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಹೇಳಿಕೆಯನ್ನುಪಾಕ್ ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ರಾಜಕೀಯ ಪಕ್ಷ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ತನ್ನ ಟ್ವಿಟರ್ ಖಾತೆ@PTIofficialಗುರುವಾರ ಟ್ವೀಟ್ ಮಾಡಿ, ವ್ಯಂಗ್ಯವಾಡಿದೆ.

‘ಜೈಷ್–ಎ–ಮೊಹಮದ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ನಡೆಸಿದ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನುಕೂಲವಾಗಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 22 ಸ್ಥಾನಗಳಲ್ಲಿ ಬಿಜೆಪಿ ವಿಜಯ ಸಾಧಿಸಲಿದೆ’ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಹೇಳಿಕೆಯ ವಿಡಿಯೊವನ್ನು ಪಿಟಿಐ ಟ್ವೀಟ್ ಮಾಡಿದೆ.

ADVERTISEMENT

‘ವಾಯುಪಡೆಯ ವರ್ತನೆ, ಯುದ್ಧಕೋರತನ, ಬಂಧನದಲ್ಲಿರುವ ಯೋಧ, ಗಡಿಯ ಎರಡೂ ಭಾಗಗಳಲ್ಲಿ ಆಪತ್ತಿನಲ್ಲಿರುವಲಕ್ಷಾಂತರ ಜನರ ಬದುಕು ನಿಮಗೆ22 ಸ್ಥಾನಗಳನ್ನು ಗೆಲ್ಲುವ ಮಾರ್ಗವಾಗಿ ಕಾಣಿಸುತ್ತಿದೆ.ಯುದ್ಧವೆನ್ನುವುದು ಚುನಾವಣೆಯ ಆಟವೇ?’ ಎಂದು ಪಿಟಿಐ ಪಕ್ಷ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ.

ಹಿರಿಯ ಪತ್ರಕರ್ತೆ ಬರ್ಖಾ ದತ್ @BDUTTಈ ಮೊದಲು ಯಡಿಯೂರಪ್ಪ ಹೇಳಿಕೆಯನ್ನು ವಿಶ್ಲೇಷಿಸಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಪಿಟಿಐ, ‘ನಿಮ್ಮನ್ನು ಯುದ್ಧದತ್ತ ದೂಡಲಾಗುತ್ತಿದೆ ಎಂಬ ಸಂಗತಿಈಗಲಾದರೂ ನಿಮಗೆ ಅರ್ಥವಾಗಿರಬಹುದು ಎಂದುಕೊಳ್ಳುತ್ತೇವೆ. ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಾತೊರೆಯುತ್ತಿರುವ ಜನರನ್ನು ಬಿಟ್ಟುಹಾಕಿ. ಯುದ್ಧವೆನ್ನುವುದು ಯಾವುದೇ ದೇಶದ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ. ಅದರ ಸೈನಿಕರು ಮತ್ತು ನಾಗರಿಕರು ಜೊತೆಜೊತೆಗೆ ಹಾನಿ ಅನುಭವಿಸುತ್ತಾರೆ. ಒಬ್ಬ ಮನುಷ್ಯನ ರಾಜಕೀಯ ಹಿತಾಸಕ್ತಿಗಾಗಿ ಯುದ್ಧ ಆರಂಭಿಸುವುದು ಸಲ್ಲದು’ ಎಂದು ಹೇಳಿತ್ತು.

ಯಡಿಯೂರಪ್ಪ ಹೇಳಿಕೆಯನ್ನು ಪಿಟಿಐ ಪಕ್ಷವು ವಿಶ್ವಮಟ್ಟದಲ್ಲಿ ಭಾರತಕ್ಕೆ ಮಸಿ ಬಳಿಯಲು ಉಪಯೋಗಿಸುತ್ತಿರುವ ರೀತಿಯನ್ನು ಬರ್ಖಾದತ್ ಖಂಡಿಸಿದ್ದರು. ‘ಯಡಿಯೂರಪ್ಪ ಹೇಳಿಕೆಯನ್ನು ನಿಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ನೀವು ಹಾತೊರೆಯುತ್ತಿದ್ದೀರಿ. ಪಾಕಿಸ್ತಾನದ ಅಧಿಕೃತ ರಾಜಕೀಯ ಪಕ್ಷವೊಂದು ಹೀಗೆ ಮಾಡುತ್ತದೆ ಎಂದು ನಾನು ಊಹಿಸಿರಲಿಲ್ಲ.ಇದು ಒಪ್ಪಲು ಸಾಧ್ಯವಿಲ್ಲದ, ಪ್ರಚೋದನಾಕಾರಿ ಮತ್ತು ಅನುಚಿತ ಹೇಳಿಕೆ. ಭಯೋತ್ಪಾದನೆಯನ್ನುಇಡೀ ಭಾರತ ಒಂದೇ ದನಿಯಾಗಿ ಖಂಡಿಸುತ್ತದೆ. ನಮ್ಮ ದೇಶದ ರಾಜಕೀಯವನ್ನು ನಾವು ನೋಡಿಕೊಳ್ಳುತ್ತೇವೆ. ದಯವಿಟ್ಟು ನಿಮ್ಮ ಕೆಲಸಗಳನ್ನು ನೀವು ಮಾಡಿಕೊಳ್ಳಿ’ ಎಂದು ಬರ್ಖಾ ತಿರುಗೇಟು ನೀಡಿದ್ದರು.

ಬರ್ಖಾ ಮಾತಿಗೆ ಪ್ರತಿಕ್ರಿಯಿಸಿದ್ದ ಪಿಟಿಐ, ‘ನಿಮ್ಮ ದೇಶದ ಒಳರಾಜಕೀಯ ನಮ್ಮ ದೇಶವನ್ನು ಯುದ್ಧಕ್ಕೆ ದೂಡುತ್ತಿದೆ. ಹೀಗಾಗಿ ಇದು ನಮ್ಮ ತಲೆಬಿಸಿಯೂ ಆಗಿದೆ. ಸತ್ಯ ಏನು ಎಂಬುದು ಇನ್ನಾದರೂ ಅರಿತುಕೊಳ್ಳಿ. ನಾವೂ ಸಹ ಭಯೋತ್ಪಾದನೆಯ ಸಂತ್ರಸ್ತರೇ ಆಗಿದ್ದೇವೆ. ಮಾತುಕತೆಯಲ್ಲಿ ಪರಿಹಾರವಿದೆ. ಯುದ್ಧಕ್ಕೆ ಬೇಡ ಎನ್ನಿ’ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.