ನವದೆಹಲಿ: ಸಾರಜನಕ ಮಾಲಿನ್ಯದ ಪರಿಣಾಮವಾಗಿ ವಿಶ್ವದ ಮೂರನೇ ಒಂದರಷ್ಟು ಭಾಗದಲ್ಲಿರುವ ಉಪ ನದಿಗಳ ಜಲಾನಯನ ಪ್ರದೇಶದಲ್ಲಿ 2050ರ ವೇಳೆಗೆ ಶುದ್ಧ ನೀರಿನ ತೀವ್ರ ಅಭಾವ ಕಾಣಿಸಿಕೊಳ್ಳುವ ಅಪಾಯ ಇದೆ ಎಂದು ಹೊಸ ಅಧ್ಯಯನ ಹೇಳಿದೆ.
ದಕ್ಷಿಣ ಚೀನಾ, ಯುರೋಪ್‌ನ ಕೇಂದ್ರ ಭಾಗ, ಉತ್ತರ ಅಮೆರಿಕ ಹಾಗೂ ಆಫ್ರಿಕಾದಲ್ಲಿ ಉಪನದಿಗಳಗುಂಟ ಇರುವ ಜಲಾನಯನ ಪ್ರದೇಶಗಳು ಹೆಚ್ಚು ಬಾಧಿತವಾಗಲಿವೆ ಎಂದು ಅಧ್ಯಯನ ಹೇಳಿದೆ.
ನೆದರ್ಲೆಂಡ್ಸ್‌ನ ವೆಗೆನಿಂಜೆನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ನಡೆಸಿದ ಅಧ್ಯಯನ ವರದಿಯು ನೇಚರ್ ಕಮ್ಯುನಿಕೇಷನ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈ ತಂಡವು, ಜಗತ್ತಿನ ವಿವಿಧೆಡೆ ಇರುವ 10 ಸಾವಿರಕ್ಕೂ ಅಧಿಕ ಜಲಾನಯನ ಪ್ರದೇಶಗಳ ವಿಶ್ಲೇಷಣೆ ನಡೆಸಿ, ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ.
2030ರ ವೇಳೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂಬುದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲೊಂದಾಗಿದೆ. ಆದರೆ, ಸಾರಜನಕದ ಮಾಲಿನ್ಯದಿಂದಾಗಿ ನೀರಿನ ಗುಣಮಟ್ಟ ಗಣನೀಯವಾಗಿ ತಗ್ಗಲಿರುವುದು ಆತಂಕಕ್ಕೆ ಕಾರಣವಾಗಿದೆ.
ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ನಗರೀಕರಣ ಹಾಗೂ ಆರ್ಥಿಕ ಚಟುವಟಿಕೆಗಳು ಕಂಡುಬರುತ್ತಿವೆ. ಹೀಗಾಗಿ ಭಾರಿ ಪ್ರಮಾಣದ ತ್ಯಾಜ್ಯ ವಸ್ತುಗಳು ನದಿ ನೀರು ಸೇರುತ್ತವೆ. ಈ ತ್ಯಾಜ್ಯಗಳ ಜೊತೆಗೆ ಅಧಿಕ ಪ್ರಮಾಣದ ಸಾರಜನಕ ಸಹ ನೀರನ್ನು ಸೇರುತ್ತದೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸಾರಜನಕದಿಂದ ನೀರಿನ ಗುಣಮಟ್ಟ ಹಾಳಾಗುವುದರಿಂದ ಶುದ್ಧ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.