ADVERTISEMENT

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ತಿರುವು: ಆಕೆ ಇನ್ನೂ ಬದುಕಿದ್ದಾಳೆ ಎಂದ ಇಂದ್ರಾಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 15:38 IST
Last Updated 16 ಡಿಸೆಂಬರ್ 2021, 15:38 IST
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ    

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ‘ಶೀನಾ ಬೋರಾ ಜೀವಂತವಾಗಿದ್ದಾಳೆ, ಕಾಶ್ಮೀರದಲ್ಲಿ ಇದ್ದಾಳೆ‘ ಎಂದು ಆಕೆಯ ತಾಯಿ ಇಂದ್ರಾಣಿ ಮುಖರ್ಜಿ ಹೇಳಿದ್ದಾರೆ.

ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಇಂದ್ರಾಣಿ ಮುಖರ್ಜಿ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ. ‘ಬೈಕುಲ್ಲಾ ಜೈಲಿನಲ್ಲಿ ಇರುವ ಸಹ-ಕೈದಿಯೊಬ್ಬರು ಕಾಶ್ಮೀರದಲ್ಲಿ ಶೀನಾಳನ್ನು ನೋಡಿದ್ದಾಗಿ ಹೇಳಿದ್ದಾರೆ. ಕೂಡಲೇ ಶೀನಾಳನ್ನು ಹುಡುಕಬೇಕು’ ಎಂದೂ ಕೋರಿದ್ದಾರೆ.

ಈ ಪತ್ರ ಕುರಿತಂತೆ ಸಿಬಿಐ ಇನ್ನೂ ದೃಢೀಕರಿಸಿಲ್ಲ. ಇಂದ್ರಾಣಿ ಅವರ ವಕೀಲರಾದ ಸಾನಾ ರಾಯಿಸ್‌ ಖಾನ್‌ ಅವರೂ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ADVERTISEMENT

‘ಸದ್ಯ ನನ್ನ ಬಳಿ ಪತ್ರ ಇಲ್ಲ. ಸಹ ಕೈದಿಯ ಮಾತು ಆಧರಿಸಿ ಸಿಬಿಐಗೆ ಪತ್ರ ಬರೆದಿದ್ದೇನೆ ಎಂದು ಕಕ್ಷಿದಾರರು ತಿಳಿಸಿದ್ದಾರೆ. ಸಹ ಕೈದಿಯ ಮುದ್ರಿತ ಹೇಳಿಕೆ ನೀಡಲು ಕೋರಿ ಅರ್ಜಿ ಸಲ್ಲಿಸಲಿದ್ದೇನೆ. ಇಂದ್ರಾಣಿ ಅವರು ಪತ್ರ ಬರೆದಿದ್ದಾರೆ ಎಂದಷ್ಟೇ ನಾನು ದೃಢೀಕರಿಸಬಲ್ಲೆ’ ಎಂದು ತಿಳಿಸಿದರು.

ಇಂದ್ರಾಣಿ ಅವರಿಗೆ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದು ವಕೀಲರಾದ ಸಾನಾ ರಾಯಿಸ್ ಖಾನ್ ತಿಳಿಸಿದರು.

ಇಂದ್ರಾಣಿ, ಆಕೆಯ ಮೊದಲ ಪತಿ ಸಂಜೀವ್‌ ಖನ್ನಾ, ಎರಡನೇ ಪತಿ ಮತ್ತು ಮಾಧ್ಯಮ ಕ್ಷೇತ್ರದ ಉದ್ಯಮಿ ಪೀಟರ್‌ ಮುಖರ್ಜಿ ಪ್ರಕರಣದ ಆರೋಪಿಗಳು. ಶೀನಾ ಅವರು ಇಂದ್ರಾಣಿ ಮತ್ತು ಅವರೊಂದಿಗೆ ಸಹಜೀವನ ನಡೆಸುತ್ತಿದ್ದ, ಕೋಲ್ಕತ್ತ ಮೂಲದ ಸಿದ್ಧಾರ್ಥ ದಾಸ್ ಅವರ ಪುತ್ರಿ.

ಶೀನಾ ಬೋರಾ ತನ್ನ ಮಲ ಸೋದರ ರಾಹುಲ್ ಜೊತೆಗೆ ಲಿವ್‌ ಇನ್‌ ಸಂಬಂಧ ಹೊಂದಿದ್ದರು. ಆದರೆ, ರಾಹುಲ್‌ ಅವರು ಇಂದ್ರಾಣಿ ಮುಖರ್ಜಿ ಅವರ ಎರಡನೇ ಪತಿ ಪೀಟರ್‌ ಅವರ ಮೊದಲ ಪತ್ನಿ ಶಬನಮ್‌ ಸಿಂಗ್‌ ಅವರ ಮಗ! ಮಲ ಸೋದರನೊಂದಿಗೆ ಸಂಬಂಧ ಹೊಂದಿದ್ದ ಕಾರಣಕ್ಕೆ ಶೀನಾ ಬೋರಾಳನ್ನು ಹತ್ಯೆ ಮಾಡಲಾಗಿದೆ ಎಂದು ಈವರೆಗೆ ನಂಬಲಾಗಿದೆ.

24 ವರ್ಷದ ಶೀನಾ ಬೋರಾ ಹತ್ಯೆಗೀಡಾಗಿದ್ದರು. 2012ರ ಮೇ 23ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆ ಪೆನ್ ತಾಲೂಕಿನಲ್ಲಿ ಶವ ಪತ್ತೆಯಾಗಿತ್ತು. 29 ದಿನ ಕಳೆದರೂ ಎಡಿಆರ್, ಎಫ್‌ಐಆರ್ ದಾಖಲಾಗಿರಲಿಲ್ಲ. ಪೆನ್‌ ಸ್ಟೇಷನ್ ಡೈರಿಯಲ್ಲಿ ಮಾತ್ರ ಕೊಲೆ ಎಂದು ನಮೂದಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.