ADVERTISEMENT

ಜಾನುವಾರು ಗಣತಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:41 IST
Last Updated 24 ಅಕ್ಟೋಬರ್ 2024, 15:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್‌ ರಂಜನ್‌ ಸಿಂಗ್‌ ಅವರು, ದೆಹಲಿಯಲ್ಲಿ ಶುಕ್ರವಾರ 21ನೇ ರಾಷ್ಟ್ರೀಯ ಸಮಗ್ರ ಜಾನುವಾರು ಗಣತಿಗೆ ಚಾಲನೆ ನೀಡಲಿದ್ದಾರೆ.

ಪಶುಸಂಗೋಪನೆಯಲ್ಲಿ ತೊಡಗಿರುವ ಪಶುಪಾಲಕ ಸಮುದಾಯಗಳು, ಪುರುಷರು ಮತ್ತು ಮಹಿಳೆಯರ ಬಗ್ಗೆಯೂ ಮೊದಲ ಬಾರಿಗೆ ದತ್ತಾಂಶ ಸಂಗ್ರಹಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಗಣತಿಯು 2025ರ ಫೆಬ್ರುವರಿ ವರೆಗೆ ನಡೆಯಲಿದೆ. ಈ ಗಣತಿಗಾಗಿ 1 ಲಕ್ಷ ಕ್ಷೇತ್ರ ಅಧಿಕಾರಿಗಳು, ಪಶುವೈದ್ಯರು, ಅರೆ–ಪಶುವೈದ್ಯರನ್ನು ನಿಯೋಜಿಸಲಾಗಿದೆ. ಎಲ್ಲ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಗಣತಿ ಕಾರ್ಯ ನಡೆಸಲಿದ್ದಾರೆ. 

ADVERTISEMENT

ಮೊಬೈಲ್‌ ಮೂಲಕ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕುದುರೆ, ಹೇಸರಗತ್ತೆ, ಕತ್ತೆ, ಒಂಟೆ, ನಾಯಿ, ಮೊಲ, ಸಾಕಾನೆಗಳ ಎಣಿಕೆ ನಡೆಯಲಿದೆ. ಕೋಳಿ, ಬಾತುಕೋಳಿ ಸೇರಿ ಕುಕ್ಕುಟ ವಿಭಾಗದಲ್ಲಿರುವ ಪಕ್ಷಿಗಳ ಎಣಿಕೆ ಮಾಡಲಾಗುತ್ತದೆ. ಜಾನುವಾರು ಮತ್ತು ಪಕ್ಷಿಗಳ ತಳಿ, ಲಿಂಗ ಮತ್ತು ವಯಸ್ಸನ್ನು ದಾಖಲಿಸಲಾಗುತ್ತದೆ. 

ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರು ಗಣತಿ ನಡೆಸಲಾಗುತ್ತದೆ. ದೇಶದ ಮೊದಲ ಗಣತಿಯು 1919ರಲ್ಲಿ ನಡೆದಿತ್ತು. ಕೊನೆಯ ಗಣತಿ 2019ರಲ್ಲಿ ಆಗಿತ್ತು. ಪಶು ಸಂಗೋಪನೆ ವಲಯದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲು ಈ ಗಣತಿ ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.