ADVERTISEMENT

ಅಸ್ಸಾಂ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಮತಪತ್ರದ ಮೂಲಕ ಮತದಾನ

ಪಿಟಿಐ
Published 23 ಫೆಬ್ರುವರಿ 2024, 13:16 IST
Last Updated 23 ಫೆಬ್ರುವರಿ 2024, 13:16 IST
   

ಗುವಾಹಟಿ: ಅಸ್ಸಾಂ ವಿಧಾನಸಬೆಯಲ್ಲಿ ಪಕ್ಷೇತರ ಅಭ್ಯರ್ಥಿ ಅಖಿಲ್ ಗೊಗೊಯ್ ಮಂಡಿಸಿದ ನಿರ್ಣಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮತಪತ್ರದ ಮೂಲಕ ಮತ ಚಲಾವಣೆ ಮಾಡಲಾಗಿದೆ.

ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದ ನಿರ್ಣಯವು 9 ಮತಗಳಿಂದ ತಿರಸ್ಕೃತಗೊಂಡಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟದ ಸರ್ಕಾರ 39 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಐವರು ಸೇರಿ ವಿರೋಧ ಪಕ್ಷಗಳ 47 ಸದಸ್ಯರ ಪೈಕಿ ನಿರ್ಣಯದ ಪರವಾಗಿ 30 ಮತಗಳು ಬಿದ್ದಿವೆ.

ಇದಕ್ಕೂ ಮುನ್ನ, ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಲಾಗಿತ್ತು. ನಿರ್ಣಯ ತಿರಸ್ಕೃತಗೊಂಡಿದೆ ಎಂದು ಸ್ಪೀಕರ್ ವಿಶ್ವಜಿತ್ ದೈಮರಿ ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಖಿಲ್ ಗೊಗೊಯ್ ಮತ್ತು ವಿಪಕ್ಷ ನಾಯಕ ದೇವವ್ರತ ಸೇರಿದಂತೆ ವಿಪಕ್ಷಗಳ ನಾಯಕರು, ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಹಾಗಾಗಿ, ಸೂಕ್ತವಾದ ಮತದಾನ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೊಪ್ಪಿದ ಸ್ಪೀಕರ್ ಅರ್ಧ ಗಂಟೆ ಬಳಿಕ ಮತ್ತೆ ಧ್ವನಿಮತದ ಮೂಲಕ ನಿರ್ಣಯ ತಿರಸ್ಕೃತಗೊಂಡಿದೆ ಎಂದು ಘೋಷಿಸಿದರು.

ADVERTISEMENT

ಇದನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು. ಒತ್ತಡಕ್ಕೆ ಮಣಿದು ಮತಪತ್ರದ ಮೂಲಕ ಮತದಾನಕ್ಕೆ ಒಪ್ಪಿದ ಸ್ಪೀಕರ್, ಬೇಕಾದ ವ್ಯವಸ್ಥೆ ಮಾಡಲು ವಿಧಾನಸಭೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ಬಳಿಕ, ವಿಧಾನಸಭೆಯ ದ್ವಾರಗಳನ್ನು ಮುಚ್ಚಿ ಪ್ರತಿ ಸದಸ್ಯರಿಗೂ ಮತ ಪತ್ರ ನೀಡಿ ಮತದಾನ ನಡೆಸಲಾಯಿತು.

ಅಂತಿಮವಾಗಿ ನಿರ್ಣಯದ ಪರ 30 ಮತ್ತು ನಿರ್ಣಯದ ವಿರುದ್ಧ (ಸರ್ಕಾರದ ಪರ) 39 ಮತಗಳು ಬಿದ್ದಿದ್ದು, ನಿರ್ಣಯವು ತಿರಸ್ಕೃತಗೊಂಡಿದೆ ಎಂದು ಸ್ಪೀಕರ್ ಘೋಷಿಸಿದರು.

ಎಲ್ಲ ಸಮಯದಲ್ಲೂ ಕೃಷಿಗೆ ನೀರು ಒದಗಿಸುವ ಮೂಲಕ 12 ತಿಂಗಳು ಕೃಷಿ ಮಾಡುವ ರಾಜ್ಯವಾಗಿ ಅಸ್ಸಾಂ ಅನ್ನು ಮಾಡುವುದು ನಿರ್ಣಯದ ಉದ್ದೇಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.