ಶ್ರೀನಗರ: ದೇಶದಲ್ಲಿ ಇದೇ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಸರ್ಕಾರ ಗುರುವಾರ ಹೇಳಿದೆ.
ಇ.ವಿ ಬ್ಯಾಟರಿಗಳ ತಯಾರಿಕೆಗೆ ಲಿಥಿಯಂ ಪ್ರಮುಖ ವಸ್ತುವಾಗಿದೆ.
ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಎಂಬಲ್ಲಿ 59 ಲಕ್ಷ ಟನ್‌ಗಳಷ್ಟು ಲಿಥಿಯಂ ನಿಕ್ಷೇಪವಿರುವುದು ಕಂಡುಬಂದಿವೆ ಎಂದು ಗಣಿ ಇಲಾಖೆ ಕಾರ್ಯದರ್ಶಿವಿವೇಕ್ ಭಾರದ್ವಾಜ್ ಹೇಳಿದ್ದಾರೆ.
ತಾಂತ್ರಿಕ ಕ್ಷೇತ್ರಕ್ಕೆ ನಿರ್ಣಾಯಕ ಖನಿಜ ಪೂರೈಕೆಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಂ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಈ ಹಿಂದೆ, ಗಣಿ ಸಚಿವಾಲಯವು ಹೇಳಿತ್ತು. ಈ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.
ಪ್ರಸ್ತುತ, ಭಾರತವು ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್‌ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ನವದೆಹಲಿಯಲ್ಲಿ ನಡೆದ 62ನೇ ಕೇಂದ್ರ ಭೂಗರ್ಭಶಾಸ್ತ್ರ ಪ್ರೋಗ್ರಾಮಿಂಗ್ ಬೋರ್ಡ್‌ನ ಸಭೆಯಲ್ಲಿ ಮಾತನಾಡಿದ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ ಅಥವಾ ಸೋಲಾರ್ ಪ್ಯಾನಲ್ ಆಗಿರಲಿ, ಎಲ್ಲಕ್ಕೂ ಖನಿಜಗಳು ಬೇಕಾಗುತ್ತವೆ ಎಂದು ಹೇಳಿದರು.
ಸ್ವಾವಲಂಬಿಯಾಗಲು, ದೇಶವು ನಿರ್ಣಾಯಕ ಖನಿಜಗಳನ್ನು ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಚಿನ್ನದ ಆಮದು ಕಡಿಮೆಯಾದರೆ, ನಾವು ಸ್ವಾವಲಂಬಿ ಆಗುತ್ತೇವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.