ಹೈದರಾಬಾದ್ : ಬಿಆರ್‌ಎಸ್ ಪಕ್ಷದ ಇಬ್ಬರು ಶಾಸಕರು ಶುಕ್ರವಾರ ಪಕ್ಷ ತೊರೆದಿದ್ದು, ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ ಆಗಿದೆ.
ಖಾನಾಪುರ ಶಾಸಕಿ ಅಜ್ಮೀರಾ ರೇಖಾ ಮತ್ತು ವಿಧಾನ ಪರಿಷತ್ ಸದಸ್ಯ ಕಾಸಿರೆಡ್ಡಿ ನಾರಾಯಣ ರೆಡ್ಡಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಇಬ್ಬರು ಹಿರಿಯ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಸೇರಿದರು. ಇವರ ಜತೆಗೆ ನಾಗರ್‌ಕರ್ನೂಲ್ ಜಿಲ್ಲೆಯ ಹಲವು ಮುಖಂಡರು ಕೂಡ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
‘ಕಳೆದ 12 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನೀವು (ಪಕ್ಷ) ನನಗೆ ದ್ರೋಹ ಮಾಡಿದ್ದೀರಿ. ಹಾಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಮಾಡಿದ ಸೇವೆಯನ್ನು ಜನರಿಗೆ ತಿಳಿಸುತ್ತೇನೆ. ಚುನಾವಣಾ ಕಣದಲ್ಲಿ ನನ್ನ ಶಕ್ತಿಯನ್ನು ತೋರಿಸುತ್ತೇನೆ’ ಎಂದು ಹೇಳಿದ ಶಾಸಕಿ ರೇಖಾ ಗದ್ಗದಿತರಾದರು.
ಮುಂಬರುವ ಚುನಾವಣೆಗೆ ಬಿಆರ್‌ಎಸ್ ಟಿಕೆಟ್ ನಿರಾಕರಿಸಿದ್ದರಿಂದ ರೇಖಾ ಅವರು ಅಸಮಾಧಾನಗೊಂಡಿದ್ದರು.
‘ಕಾಂಗ್ರೆಸ್ ಇತ್ತೀಚೆಗೆ ಘೋಷಿಸಿದ ಆರು ಭರವಸೆಗಳು ಜನರಿಗೆ ಪ್ರಯೋಜನಕಾರಿಯಾಗಿದ್ದು, ತಮ್ಮ ಬೆಂಬಲಿಗರು ಕಾಂಗ್ರೆಸ್ ಸೇರಲು ಸಲಹೆ ನೀಡಿದ್ದರು. ಹಾಗಾಗಿ ಈ ನಿರ್ಧಾರ ಮಾಡಿದೆ. ವಿಧಾನ ಪರಿಷತ್‌ನಲ್ಲಿ ನನ್ನ ಅಧಿಕಾರಾವಧಿ ಇನ್ನೂ ನಾಲ್ಕು ವರ್ಷ ಇದೆ. ಕಾಂಗ್ರೆಸ್ ಟಿಕೆಟ್ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ’ ಎಂದು ಕಾಸಿರೆಡ್ಡಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.