ADVERTISEMENT

ವಿದರ್ಭ: ಭದ್ರಕೋಟೆಯಲ್ಲೇ ಬಿಜೆಪಿಗೆ ಹಿನ್ನಡೆ

ಫಡಣವೀಸ್‌ ತವರು ಪ್ರಾಂತದಲ್ಲಿ 15 ಕ್ಷೇತ್ರ ಕಳೆದುಕೊಂಡ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 17:27 IST
Last Updated 25 ಅಕ್ಟೋಬರ್ 2019, 17:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಮಹಾರಾಷ್ಟ್ರದಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುವ ವಿದರ್ಭ ಪ್ರಾಂತದಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳನ್ನು ಬಿಜೆಪಿ ಈ ಬಾರಿ ಕಳೆದುಕೊಂಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವಿದರ್ಭ ಪ್ರಾಂತದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕೇಂದ್ರ ಕಚೇರಿ ಇರುವ ನಾಗಪುರವು ವಿದರ್ಭ ಪ್ರಾಂತದ ಕೇಂದ್ರ ಸ್ಥಾನವಾಗಿದೆ.ಆರಂಭದಲ್ಲಿ ಈ ಪ್ರಾಂತವು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2 ದಶಕಗಳಿಂದ ವಿದರ್ಭವು ಬಿಜೆಪಿಯ ತೆಕ್ಕೆಯಲ್ಲಿದೆ. ಆದರೆ ಈ ಚುನಾವಣೆಯಲ್ಲಿ ವಿದರ್ಭದ ಮೇಲಿನ ಬಿಜೆಪಿಯ ಹಿಡಿತ ಸಡಿಲಗೊಂಡಿದೆ.

‘ಬಿಜೆಪಿಯು ತಮ್ಮನ್ನು ಕಡೆಗಣಿಸಿದೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಜನರಲ್ಲಿ ಬಿಜೆಪಿ ಬಗೆಗೆ ಅಸಮಾಧಾನವಿದೆ. ಅಲ್ಲದೆ ರೈತ ಚಳವಳಿಯ ಕೇಂದ್ರ ಸ್ಥಾನವೂ ವಿದರ್ಭವೇ ಆಗಿದೆ. ಇದೆಲ್ಲವೂ ಮತದಾನದ ಮೇಲೆ ಪರಿಣಾಮ ಬೀರಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

‘ರೈತರ ಸಮಸ್ಯೆ ಈ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ರೈತರ ಆತ್ಮಹತ್ಯೆ ಇನ್ನೂ ನಿಂತಿಲ್ಲ. ಬಿಜೆಪಿ ನಾಯಕರು ವಾಸ್ತವಕ್ಕೆ ಮರಳಬೇಕಿದೆ’ ಎಂದು ವಿದರ್ಭ ಜನ ಆಂದೋಲನ ಸಮಿತಿ ಸಂಸ್ಥಾಪಕ ಕಿಶೋರ್ ತಿವಾರಿ ಹೇಳಿದ್ದಾರೆ. ಬಿಜೆಪಿ ಸದಸ್ಯರಾಗಿದ್ದ ತಿವಾರಿ, ಚುನಾವಣೆಗೂ ಮುನ್ನವಷ್ಟೇ ಶಿವಸೇನಾ ಸೇರಿದ್ದರು.

ಈ ಪ್ರಾಂತದಲ್ಲಿ ಹಿಡಿತ ಹೊಂದಿದ್ದ ನಿತಿನ್ ಗಡ್ಕರಿ, ರಾಜ್ಯ ಸಚಿವರಾದ ಚಂದ್ರಶೇಖರ್‌ ಭಾವನಕುಲೆ, ಸುಧೀರ್ ಮುನಗಂಟೀವರ್‌ ಅವರನ್ನು ಕಡೆಗಣಿಸಲಾಗಿದೆ. ಹೀಗಾಗಿಯೇ ಪಕ್ಷಕ್ಕೆ ಇಲ್ಲಿ ಹಿನ್ನಡೆ ಆಗಿದೆ. ಈ ಪ್ರಾಂತದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಸ್ಥಳೀಯ ನಾಯಕರು ಮತಗಟ್ಟೆ ಮಟ್ಟದಲ್ಲಿ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇದೂ ಸಹ ಬಿಜೆಪಿಯ ಹಿನ್ನಡೆಗೆ ಕಾರಣ ಎಂದು ಬಿಜೆಪಿ ಮೂಲಗಳು ಅಭಿಪ್ರಾಯಪಟ್ಟಿವೆ.

ಫಡಣವೀಸ್ ಪ್ರಾಯಾಸದ ಗೆಲವು:ವಿದರ್ಭ ಪ್ರಾಂತದ ನೈರುತ್ಯ ನಾಗಪುರ ಕ್ಷೇತ್ರದಿಂದ ದೇವೇಂದ್ರ ಫಡಣವೀಸ್ ಸ್ಪರ್ಧೆಗೆ ಇಳಿದಿದ್ದರು. ಅವರು ಗೆಲುವು ದಾಖಲಿಸಿದ್ದಾರೆ. ಆದರೆ ಅವರ ಗೆಲುವಿನ ಅಂತರ ಕುಸಿದಿದೆ.ಮಹಾರಾಷ್ಟ್ರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಂಜಿತ್ ದೇಶಮುಖ್ ಅವರ ಮಗ ಆಶಿಶ್ ದೇಶಮುಖ್ ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿದ್ದಿದ್ದರು. ಫಡಣವೀಸ್ ಮತ್ತು ಆಶಿಶ್ ನಡುವೆ ಪ್ರಬಲ ಪೈಪೋಟಿ ಇತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.