ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಇಂದು (ಮಂಗಳವಾರ) ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ.
ಈಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಗುರಿಯಾಗಿಸಿಕೊಂಡು ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿದ್ದರು.
ದಾಳಿ ಬಳಿಕ ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಮ್ ಖಾನ್, ರಾಜಕೀಯ ಮುಖಂಡ ಬಾಬಾ ಸಿದ್ದಿಕ್ ಮತ್ತು ಅವರ ಮಗ ಜೀಶನ್ ಸಿದ್ದಿಕ್ ಅವರೊಂದಿಗೆ ಏಕನಾಥ ಶಿಂದೆ ಕೆಲಕಾಲ ಮಾತುಕತೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
‘ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ‘ಕೊಲ್ಲುವ ಉದ್ದೇಶದಿಂದಲೇ’ ಅವರ ನಿವಾಸದತ್ತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಗುಜರಾತ್‌ನ ಕಛ್ ಜಿಲ್ಲೆಯ ಮಾತಾ ನೊ ಮಡ್ ಗ್ರಾಮದಲ್ಲಿ ಆರೋಪಿಗಳಾದ ವಿಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಂಬವರನ್ನು ಸೋಮವಾರ ತಡರಾತ್ರಿ ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಇಬ್ಬರೂ ಬಿಹಾರದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.