ADVERTISEMENT

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಪೂರ್ವಜರ ಊರಲ್ಲಿ ವಿಶೇಷ ಪೂಜೆ

ಗೆಲುವಿಗಾಗಿ ತಮಿಳುನಾಡಿನ ತುಳಸೇಂದ್ರಪುರ ನಿವಾಸಿಗಳ ಪ್ರಾರ್ಥನೆ

ರಾಯಿಟರ್ಸ್
Published 5 ನವೆಂಬರ್ 2024, 14:50 IST
Last Updated 5 ನವೆಂಬರ್ 2024, 14:50 IST
ತುಳಸೇಂದ್ರಪುರದ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಸ್ಥಳೀಯರ ಜತೆ ವಿದೇಶಿಯರೂ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು –ಪಿಟಿಐ ಚಿತ್ರ
ತುಳಸೇಂದ್ರಪುರದ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಸ್ಥಳೀಯರ ಜತೆ ವಿದೇಶಿಯರೂ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು –ಪಿಟಿಐ ಚಿತ್ರ   

ತುಳಸೇಂದ್ರಪುರ (ತಮಿಳುನಾಡು): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಗೆಲುವಿಗೆ ತಮಿಳುನಾಡಿನ ತುಳಸೇಂದ್ರಪುರದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಿತು.

ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಪೂಜೆಯಲ್ಲಿ ಸ್ಥಳೀಯರು ಹಾಗೂ ಕೆಲವು ಪ್ರವಾಸಿಗರು ಪಾಲ್ಗೊಂಡರು. ಕಮಲಾ ಹ್ಯಾರಿಸ್‌ ಅವರ ಅಜ್ಜ ‍ಪಿ.ವಿ.ಗೋಪಾಲನ್‌ ಅವರು (ತಾಯಿ ಡಾ. ಶ್ಯಾಮಲಾ ಗೋಪಾಲನ್‌ ಅವರ ತಂದೆ) ತುಳಸೇಂದ್ರಪುರ ಗ್ರಾಮದವರು. ಇಲ್ಲಿ ಹುಟ್ಟಿ ಬೆಳೆದಿದ್ದ ಅವರು ಬಳಿಕ ಚೆನ್ನೈಗೆ ಸ್ಥಳಾಂತರಗೊಂಡಿದ್ದರು.

ವಿಶೇಷ ಪೂಜೆಯಲ್ಲಿ ‘ಕಮಲಾ ಹ್ಯಾರಿಸ್‌ ಗೆಲ್ಲಲಿ’ ಎಂದು ಪ್ರಾರ್ಥಿಸಲಾಯಿತು. ಪೂಜೆಯಲ್ಲಿ ಪಾಲ್ಗೊಂಡವರಿಗೆ ಅರ್ಚಕರು ಕುಂಕುಮ ಪ್ರಸಾದ ನೀಡಿದರು. ದೇವಾಲಯದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದವರ ಹೆಸರನ್ನು ಕಲ್ಲಿನಲ್ಲಿ ಕೆತ್ತಲಾಗಿದ್ದು, ಅದರಲ್ಲಿ ಕಮಲಾ ಹ್ಯಾರಿಸ್‌ ಮತ್ತು ಪಿ.ವಿ.ಗೋಪಾಲನ್‌ ಅವರ ಹೆಸರುಗಳೂ ಇವೆ.

ADVERTISEMENT

‘ಕಮಲಾ ನಮ್ಮವರೇ ಆಗಿದ್ದು, ಅವರು ಗೆಲ್ಲಬೇಕು’ ಎಂದು ಸ್ಥಳೀಯ ಮುಖಂಡ ಸುಧಾಕರ್‌ ಹೇಳಿದರು. ‘ಅವರ ಗೆಲುವು ಘೋಷಣೆಯಾದ ಬಳಿಕ ವಿಶೇಷ ಪೂಜೆ ಸಲ್ಲಿಸುತ್ತೇವೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲು ನಿರ್ಧರಿಸಿದ್ದೇವೆ’ ಎಂದರು.

ಮಂಗಳವಾರ ನಡೆದ ಪೂಜೆಯಲ್ಲಿ ಬ್ರಿಟನ್‌ನ ಒಬ್ಬ ಮತ್ತು ಅಮೆರಿಕದ ಇಬ್ಬರು ಪ್ರಜೆಗಳು ಪಾಲ್ಗೊಂಡರು. ‘ನಾನು ಕಮಲಾ ಅವರ ಅಭಿಮಾನಿ. ಅವರ ಪೂರ್ವಜರ ಗ್ರಾಮವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ’ ಎಂದು ವಾಷಿಂಗ್ಟನ್‌ನ ಸಿಯಾಟಲ್‌ನ ನಿವಾಸಿ, ಈಗ ಚೆನ್ನೈನಲ್ಲಿ ನೆಲೆಸಿರುವ ಡೆವೊನಿ ಇವಾನ್ಸ್‌ ತಿಳಿಸಿದರು.

2020ರಲ್ಲಿ ಕಮಲಾ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ತುಳಸೇಂದ್ರಪುರ ಗ್ರಾಮ ಎಲ್ಲರ ಗಮನ ಸೆಳೆದಿತ್ತು. ಅಂದು ಇಲ್ಲಿನ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. 

ಗೋಪಾಲನ್‌ ಮಗಳಾದ ಡಾ.ಶ್ಯಾಮಲಾ ಗೋಪಾಲನ್ ಅವರು ಜಮೈಕಾದ ಡೊನಾಲ್ಡ್‌ ಹ್ಯಾರಿಸ್‌ ಅವರನ್ನು ಮದುವೆಯಾಗಿದ್ದರು.  ಈ ದಂಪತಿಗೆ ಇಬ್ಬರು (ಕಮಲಾ ಹ್ಯಾರಿಸ್‌, ಮಾಯಾ ಹ್ಯಾರಿಸ್‌) ಹೆಣ್ಣು ಮಕ್ಕಳಿದ್ದಾರೆ. ಕಮಲಾ ಅವರು ಐದು ವರ್ಷದವರಿದ್ದಾಗ ತಮ್ಮ ತಾಯಿ ಜತೆ ಚೆನ್ನೈಗೆ ಬಂದಿದ್ದಾಗ ತುಳಸೇಂದ್ರಪುರಕ್ಕೂ ಭೇಟಿ ಕೊಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.