ಶ್ರೀನಗರ: ‘ಕಾಶ್ಮೀರವು ಮಾನವೀಯ ವಿಚಾರವಾಗಿದ್ದು, ಶಾಂತಿ ಸ್ಥಾಪನೆ ಪರವಾಗಿ ಇದ್ದರೂ ನನ್ನನ್ನು ರಾಷ್ಟ್ರ ವಿರೋಧಿ, ಶಾಂತಿ ಸ್ಥಾಪನೆ ವಿರೋಧಿ ಮತ್ತು ಪ್ರತ್ಯೇಕತಾವಾದಿ ಎಂದು ಬಿಂಬಿಸಲಾಗಿತ್ತು’ ಎಂದು ಹುರಿಯತ್ ಮುಖ್ಯಸ್ಥ ಮಿರ್ವಾಯಿಜ್ ಉಮರ್ ಫಾರೂಕ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷಗಳ ಗೃಹಬಂಧನದಿಂದ ಶುಕ್ರವಾರ ಮುಕ್ತರಾಗಿರುವ ಮಿರ್ವಾಯಿಜ್, ಶ್ರೀನಗರದಲ್ಲಿರುವ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಮೊದಲ ಧರ್ಮೋಪದೇಶ ನೀಡಿದರು.
‘ಉಕ್ರೇನ್–ರಷ್ಯಾ ಯುದ್ಧ ವಿಚಾರಕ್ಕೆ ಸಂಬಂಧಿಸಿ ಪ್ರಸ್ತುತ ಸನ್ನಿವೇಶವು ಯುದ್ಧದ ಸಮಯವಲ್ಲ ಎಂದು ಹೇಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಕ್ಕು ಇದೆ. ನಾವು ಸಹ ಮಾತುಕತೆ ಮೂಲಕ ಜಮ್ಮು-ಕಾಶ್ಮೀರ ಕುರಿತು ತೀರ್ಮಾನ ಕೈಗೊಳ್ಳಲು ಒತ್ತಾಯಿಸುತ್ತಿದ್ದೇವೆ. ಶಾಂತಿ ಮಾರ್ಗದಲ್ಲಿ ನಡೆದಿದ್ದಕ್ಕಾಗಿ ನಾವು ಹಲವು ಕಠಿಣ ಸನ್ನಿವೇಶನಗಳನ್ನು ಎದುರಿಸಬೇಕಾಯಿತು. ಆದಾಗ್ಯೂ, ನಮ್ಮನ್ನು ಪ್ರತ್ಯೇಕತಾದಿಗಳು, ದೇಶ ವಿರೋಧಿ ಮತ್ತು ಶಾಂತಿ ಸ್ಥಾಪನೆಯ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಯಿತು. ನಮಗೆ ಯಾವುದೇ ವೈಯಕ್ತಿಕ ಆಕಾಂಕ್ಷೆ ಇಲ್ಲ. ಆದರೆ, ಜಮ್ಮು-ಕಾಶ್ಮೀರ ಕುರಿತು ಶಾಂತಿಯುತ ತೀರ್ಮಾನವಷ್ಟೇ ಬೇಕು’ ಎಂದಿದ್ದಾರೆ.
2019ರ ಆಗಸ್ಟ್ ಐದರಂದು ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಿದ ಬಳಿಕ ಜನರು ಕಷ್ಟದ ಪರಿಸ್ಥಿತಿಗೆ ದೂಡಲ್ಪಟ್ಟರು. ಮಿರ್ವಾಯಿಜ್ ಆದ ನನಗೆ ಜನರ ಪರವಾಗಿ ಧ್ವನಿಯೆತ್ತುವ ಜವಾಬ್ದಾರಿ ಇದೆ. ಹುರಿಯತ್ ಕಾನ್ಫರೆನ್ಸ್ ಜನರ ಪರವಾಗಿ ನಿರಂತವಾಗಿ ಧ್ವನಿಯೆತ್ತಿತ್ತು. ಆದರೆ, ಮಾಧ್ಯಮ ನಮ್ಮ ಹೇಳಿಕೆಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿತು. ಇದು ನಾವೆಲ್ಲರೂ ಸಹನಶೀಲವಾಗಿರುವ ಸಮಯವಾಗಿದ್ದು, ದೇವರಲ್ಲಿ ನಂಬಿಕೆಯಿಡುವಂತೆ ನನ್ನ ಜನರಿಗೆ ಹೇಳಬೇಕಿದೆ ಎಂದರು.
ಹಲವರಿಗೆ ಜಮ್ಮು–ಕಾಶ್ಮೀರವು ಭೌಗೋಳಿಕ ವಿಚಾರವಾಗಿರಬಹುದು. ಆದರೆ, ಜಮ್ಮು–ಕಾಶ್ಮೀರದ ಜನರಿಗೆ ಇದೊಂದು ಮಾನವೀಯತೆಯ ವಿಚಾರವಾಗಿದೆ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.