ADVERTISEMENT

ಮೊದಲ ಬಾರಿ ದೇಗುಲ ಪ್ರವೇಶಿಸಿದ ಪ. ಪಂಗಡದ 200 ಮಂದಿ: ತ.ನಾಡಲ್ಲಿ ಐತಿಹಾಸಿಕ ಕ್ಷಣ

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2023, 11:01 IST
Last Updated 30 ಜನವರಿ 2023, 11:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿರುವಣ್ಣಾಮಲೈ: ಐತಿಹಾಸಿಕ ಬೆಳವಣಿಯೊಂದರಲ್ಲಿ, ಇಲ್ಲಿನ ಪರಿಶಿಷ್ಟ ಪಂಗಡಕ್ಕೆ ಸೇರಿದ 200 ಮಂದಿ ಇದೇ ಮೊದಲ ಬಾರಿಗೆ ದೇಗುಲಕ್ಕೆ ಪ್ರವೇಶ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಸಮುದಾಯದ ಮಂದಿಗೆ ದಶಕಗಳಿಂದ ದೇಗುಲ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಸೋಮವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ದೇಗುಲ ಪ್ರವೇಶ ಮಾಡುವ ಮೂಲಕ ಹಲವು ವರ್ಷಗಳ ಅಸ್ಪೃಶ್ಯತೆ ಪಿಡುಗಿಗೆ ತೆರೆಬಿತ್ತು.

ಸುಮಾರು ವರ್ಷ‌ಗಳ ಬಳಿಕ ಈ ಸಮುದಾಯದವರು ದೇಗುಲಕ್ಕೆ ಪ್ರವೇಶ ಮಾಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ದೇವರಿಗೆ ಪುಷ್ಪಹಾರ ಸಮರ್ಪಿಸಿದ್ದಾರೆ. ಕಟ್ಟಿಗೆ ಹಾಗೂ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಪೊಂಗಲ್‌ ತಯಾರಿ ಮಾಡಿದ್ದಾರೆ.

ADVERTISEMENT

‘ನಾನು ದೇಗುಲದ ಒಳಗೆ ಇದೇ ಮೊದಲ ಬಾರಿಗೆ ಬಂದಿದ್ದೇನೆ. ದೇಗುಲದ ಒಳಗೆ ಯಾವತ್ತೂ ದೇವರನ್ನು ನಾವು ನೋಡಿಲ್ಲ. ದೇಗುಲದ ಹೊರಗೆ ನಿಂತು ಅಲ್ಲಿಂದಲೇ ಕೈ ಮುಗಿಯಬೇಕಿತ್ತು. ಇಂದು ನನಗೆ ಕನಸು ನನಸಾದ ಭಾವ. ನನಗೆ ಕೂಸು ಹುಟ್ಟಿದಷ್ಟು ಸಂತಸವಾಗುತ್ತಿದೆ‘ ಎನ್ನುವುದು ಗರ್ಭಿಣಿ ವಿಜಯಾ ಎನ್ನುವವರ ಮಾತು.

‘ನಾನು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದವಳು. ಆದರೆ ಈವರೆಗೆ ದೇಗುಲ ಪ್ರವೇಶ ಮಾಡಿಲ್ಲ. ಈ ಸಮಾನತೆ ನಿತ್ಯವೂ ಮುಂದುವರಿಯಬೇಕು‘ ಎಂದು ಕಾಲೇಜು ವಿದ್ಯಾರ್ಥಿ ಗೋಮತಿಯವರ ಹರ್ಷದ ಮಾತುಗಳು.

‘ಶಾಲೆಯಲ್ಲಿ ರಕ್ಷಕ–ಶಿಕ್ಷಕ ಸಭೆಯ ವೇಳೆ ಹೀಗೊಂದು ಅಸ್ಪೃಶ್ಯತೆ ಆಚರಣೆ ಬಗ್ಗೆ ಗೊತ್ತಾಗಿತ್ತು. ಇದಾದ ಹಲವು ಶಾಂತಿ ಸಭೆಗಳನ್ನು ಮಾಡಿ, ಪರಿಶಿಷ್ಟ ಪಂಗಡದ ಜನರನ್ನು ದೇಗುಲಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದಿದೆ‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕೇಯನ್‌ ಹೇಳಿದ್ದಾರೆ.

ಹಲವು ಮಾತುಕತೆಗಳು ಆದ ಬಳಿಕವೂ ಪ್ರಭಾವಿ ಸಮುದಾಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. 400 ‍ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.