ನವದೆಹಲಿ: ಭಾರತ ಹಾಗೂ ವಿಶ್ವದೆಲ್ಲೆಡೆ ಜನರು ಶುಕ್ರವಾರ ಯೋಗಾಸನದ ಮೂಲಕ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.
ದೇಶದ ಎಲ್ಲೆಡೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ, ಜನರು ಯೋಗಾಸನಗಳನ್ನು ಹಾಕುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮೆರುಗು ತಂದರು.
ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್ ಸರೋವರದ ತಟದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗಾಭ್ಯಾಸ ಮಾಡುವಂತೆ ಜನರನ್ನು ಹುರಿದುಂಬಿಸಿದರು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಮೋದಿ ಅವರೊಂದಿಗೆ ವಿವಿಧ ಆಸನಗಳನ್ನು ಹಾಕಿ ಸಂಭ್ರಮಿಸಿದರು. ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.
ದಾಲ್ ಸರೋವರ ದಡದಲ್ಲಿರುವ ಶೇರ್–ಎ–ಕಾಶ್ಮೀರ್ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್‌ಕೆಐಸಿಸಿ) ನಡೆದ 10ನೇ ಅಂತರರಾಷ್ಟ್ರೀಯ ಯೋಗ ದಿನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಯೋಗ ಕುರಿತು ಜನರು ಮಾತನಾಡಿದಾಗಲೆಲ್ಲಾ, ಅದು ಅಲ್ಲಾ, ಈಶ್ವರ ಅಥವಾ ದೇವರನ್ನು ಕಾಣುವುದಕ್ಕೆ ಕ್ರಮಿಸುವ ಆಧ್ಯಾತ್ಮಿಕ ಪಯಣ ಎಂದೇ ಎಲ್ಲರು ಭಾವಿಸುತ್ತಾರೆ’ ಎಂದರು.
‘ಆಧ್ಯಾತ್ಮಿಕ ಪಯಣ ಎಂಬುದನ್ನು ಕ್ಷಣ ಕಾಲ ಬದಿಗಿಟ್ಟು ಯೋಚಿಸಿದರೆ, ವೈಯಕ್ತಿಕ ಬೆಳವಣಿಗೆ ಕುರಿತು ಎಲ್ಲರೂ ಗಮನ ಕೇಂದ್ರೀಕರಿಸಬೇಕು. ಯೋಗ ಎಂಬುದು ಈ ವೈಯಕ್ತಿಕ ಪ್ರಗತಿಯ ಭಾಗವೇ ಆಗಿದೆ’ ಎಂದು ಹೇಳಿದರು.
ಸರೋವರದ ದಡದಲ್ಲಿನ ಬಯಲಿನಲ್ಲಿ ಯೋಗ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಬೆಳಿಗ್ಗೆಯಿಂದಲೇ ಮಳೆ ಸಿಂಚನವಾಗುತ್ತಿದ್ದ ಕಾರಣ, ಕೇಂದ್ರದ ಒಳಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಜ್ಯಗಳಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮಗಳಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ರಾಜ್ಯಪಾಲರು ಪಾಲ್ಗೊಂಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿವಿಧ ನಗರಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಪಾಲ್ಗೊಂಡಿದ್ದರು.
ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯಕ್ಕೆ ಇರುವ ದಾರಿಯೇ ಯೋಗ. ಇದನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳೋಣ- ದ್ರೌಪದಿ ಮುರ್ಮು ರಾಷ್ಟ್ರಪತಿ
‘ಸ್ವಂತಕ್ಕೆ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದು ಈ ಬಾರಿಯ ಧ್ಯೇಯವಾಕ್ಯವಾಗಿದೆ.
ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಅಂಗಳದಲ್ಲಿ ಯೋಗಾಸನ ಹಾಕಿದ ಸಿಬ್ಬಂದಿ.
ರಾಷ್ಟ್ರಪತಿಗಳ ಸಚಿವಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು.
ತಮಿಳುನಾಡಿನ ರಾಮೇಶ್ವರದಲ್ಲಿ ಜನರ ಗುಂಪೊಂದು ‘ಜಲ ಯೋಗ’ ಪ್ರದರ್ಶಿಸಿ ಗಮನ ಸೆಳೆದರು.
ಸಿಯಾಚಿನ್‌ನ ಹಿಮಚ್ಛಾದಿತ ಪರ್ವತಗಳಲ್ಲಿ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಯೋಧರು ‘ಯೋಗಾಸನ’ ಪ್ರದರ್ಶಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.