ADVERTISEMENT

Waqf Bill | ನಡಾವಳಿಯಲ್ಲಿ ನಿಯಮಗಳ ಉಲ್ಲಂಘನೆ: ಸ್ಪೀಕರ್‌ಗೆ ಪತ್ರ

ವಕ್ಫ್‌ (ತಿದ್ದುಪಡಿ) ಮಸೂದೆ ಸಭೆ; ಪಕ್ಷಪಾತ ನಿಲುವಿಗೆ ಆಕ್ರೋಶ

ಪಿಟಿಐ
Published 15 ಅಕ್ಟೋಬರ್ 2024, 15:12 IST
Last Updated 15 ಅಕ್ಟೋಬರ್ 2024, 15:12 IST
ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಡೆದ ಸಂಸತ್‌ನ ಜಂಟಿ ಸಮಿತಿಯ ಸಭೆಯಲ್ಲಿ ಅವಹೇಳನಕಾರಿ ಟೀಕೆಯನ್ನು ಖಂಡಿಸಿ ಮಂಗಳವಾರ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು– ಪಿಟಿಐ ಚಿತ್ರ
ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಡೆದ ಸಂಸತ್‌ನ ಜಂಟಿ ಸಮಿತಿಯ ಸಭೆಯಲ್ಲಿ ಅವಹೇಳನಕಾರಿ ಟೀಕೆಯನ್ನು ಖಂಡಿಸಿ ಮಂಗಳವಾರ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು– ಪಿಟಿಐ ಚಿತ್ರ   

ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಸಂಸದ ಜಗದಾಂಬಿಕ ಪಾಲ್‌ ನೇತೃತ್ವದಲ್ಲಿ ನಡೆಯುತ್ತಿರುವ ಜಂಟಿ ಸದನ ಸಮಿತಿಯ ಸಭೆಯು ‘ಸಂಸದೀಯ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆ’ಯಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಸಂಸದರು ಮಂಗಳವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. 

‘ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ರೆಹಮಾನ್‌ ಖಾನ್‌ ಅವರು ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಬಿಜೆಪಿಯ ಮಾಜಿ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರು ಸೋಮವಾರ ನಡೆದ ಸಭೆಯಲ್ಲಿ ಹೆಸರು ಉಲ್ಲೇಖಿಸಿದ್ದರಿಂದ ವಿರೋಧಪಕ್ಷದ ಸಂಸದರು ಸಭೆ ಬಹಿಷ್ಕರಿಸಿ ಹೊರನಡೆದಿದ್ದರು. ಇದಾದ ಮರುದಿನವೇ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

‘ಸಮಿತಿಯ ಅಧ್ಯಕ್ಷ ಜಗದಾಂಬಿಕ ಪಾಲ್‌ ಅವರು ಸಮಿತಿಯ ನಡಾವಳಿಗಳಲ್ಲಿ ಪಕ್ಷಪಾತಿ ನಿಲುವು ತಳೆದಿದ್ದಾರೆ’ ಎಂದು ಆರೋಪಿಸಿ ವಿರೋಧ ಪಕ್ಷದ ಸಂಸದರಾದ ಗೌರವ್‌ ಗೊಗೋಯಿ, ಸೈಯದ್‌ ನಾಸೀರ್‌ ಹುಸೇನ್‌, ಇಮ್ರಾನ್‌ ಮಸೂದ್‌ (ಕಾಂಗ್ರೆಸ್‌), ಎ.ರಾಜಾ, ಎಂ.ಎಂ.ಅಬ್ದುಲ್ಲಾ (ಡಿಎಂಕೆ) ಅಸಾದುದ್ದೀನ್‌ ಒವೈಸಿ(ಎಐಎಂಐಎಂ), ಕಲ್ಯಾಣ್‌ ಬ್ಯಾನರ್ಜಿ (ಟಿಎಂಸಿ) ಅವರು ಪತ್ರ ಬರೆದಿದ್ದಾರೆ. 

ADVERTISEMENT

2012ರಲ್ಲಿ ಕರ್ನಾಟಕ ವಕ್ಫ್‌ ಹಗರಣದ ಕರಡು ಶಾಸನದ ಕುರಿತು ಅನ್ವರ್‌ ಮಾಣಿಪ್ಪಾಡಿ ಅವರು ಜಂಟಿ ಸದನ ಸಮಿತಿ ಮುಂದೆ ಸೋಮವಾರ ಅಭಿಪ‍್ರಾಯ ಸಲ್ಲಿಸಿದ್ದರು. 

‘ವಕ್ಫ್‌ (ತಿದ್ದುಪಡಿ) ಮಸೂದೆ–2024ಗೆ ಸಂಬಂಧಿಸಿದಂತೆ ಮಾಣಿಪ್ಪಾಡಿ ಯಾವುದೇ ಉಲ್ಲೇಖ ಮಾಡಿಲ್ಲ. ಬದಲಾಗಿ, ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ, ಹಲವು ಮುಖಂಡರ ವಿರುದ್ಧ ರಾಜಕೀಯ ಪ್ರೇರಿತ ಆರೋಪಗಳನ್ನು ಸಭೆಯಲ್ಲಿ ಮಾಡಲಾಗಿತ್ತು’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಮಲ್ಲಿಕಾರ್ಜುನ ಖರ್ಗೆ ಅವರು ಸಾಂವಿಧಾನಿಕ ಹುದ್ದೆ ಹೊಂದಿದ್ದು, ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿದ್ದಾರೆ. ಅವರ ವಿರುದ್ಧ ಆರೋಪ ಮಾಡುವ ಸಭೆಯಲ್ಲಿಯೂ ಭಾಗಿಯಾಗಿರಲಿಲ್ಲ. ಈ ಕುರಿತು ವಿರೋಧ ಪಕ್ಷಗಳ ಸಂಸದರು ಸ್ಥಳದಲ್ಲಿಯೇ ಪ್ರತಿಭಟನೆ ದಾಖಲಿಸಿದರೂ ಕೂಡ, ಸಮಿತಿ ಅಧ್ಯಕ್ಷರೇ ಅವರಿಗೆ (ಮಾಣಿಪ್ಪಾಡಿ) ಮಾತನಾಡಲು ಅವಕಾಶ ನೀಡಿದ್ದರು. ಆದರೆ, ನಮ್ಮ ಅಭಿಪ್ರಾಯ ದಾಖಲಿಸಲು ಹೆಚ್ಚಿನ ಸಮಯಾವಕಾಶ ನೀಡಲಿಲ್ಲ’ ಎಂದು ಸದಸ್ಯರು ಪತ್ರದಲ್ಲಿ ತಿಳಿಸಿದ್ದಾರೆ.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಮಧ್ಯಪ್ರವೇಶಿಸಿ, ಸಮಿತಿ ಅಧ್ಯಕ್ಷರಿಗೆ ತಮ್ಮ ಕರ್ತವ್ಯವನ್ನು ನೆನಪಿಸುವ ಜತೆಗೆ ಪಕ್ಷಪಾತವಿಲ್ಲದೇ, ಸಂಸದೀಯ ನಿಯಮಗಳನ್ನು ಎತ್ತಿಹಿಡಿಯಲು ಸೂಚನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಎರಡನೇ ದಿನವೂ ಸಭಾತ್ಯಾಗ

ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ಸಂಸತ್‌ನ ಜಂಟಿ ಸಮಿತಿಯ ಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಅವಹೇಳನಕಾರಿ ಟೀಕೆ ಮಾಡಿದ್ದನ್ನು ಖಂಡಿಸಿ ಮಂಗಳವಾರವೂ ವಿರೋಧ ಪಕ್ಷದ ಹಲವು ಸಂಸದರು ಸಭಾತ್ಯಾಗ ಮಾಡಿದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳಿಂದ ಅಹವಾಲು ಆಲಿಸುತ್ತಿದ್ದ ವೇಳೆ ವಿರೋಧ ಪಕ್ಷದ ಸಂಸದರಾದ ಕಲ್ಯಾಣ್‌ ಬ್ಯಾನರ್ಜಿ ಗೌರವ್‌ ಗೊಗೋಯಿ ಎ.ರಾಜಾ ಮೊಹಮ್ಮದ್‌ ಅಬ್ದುಲ್ಲಾ ಹಾಗೂ ಅರವಿಂದ್‌ ಸಾವಂತ್‌ ಅವರು ಹೊರನಡೆದರು. ಒಂದು ತಾಸಿನ ಬಳಿಕ ಈ ಸದಸ್ಯರು ಮತ್ತೆ ಸಭೆಯಲ್ಲಿ ಭಾಗಿಯಾದರು. ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರನ್ನು ವಿರೋಧ ಪಕ್ಷದ ಸಂಸದರು ಅವಾಚ್ಯವಾಗಿ ನಿಂದಿಸಿದರು ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.  ಭಿನ್ನಾಭಿಪ್ರಾಯಗಳಿಂದ ಸತತ ಎರಡನೇ ದಿನವೂ ವಿರೋಧ ಪಕ್ಷಗಳ ಸಂಸದರು ಸಭೆ ಬಹಿಷ್ಕರಿಸಿ ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.