ADVERTISEMENT

ಕೈಗಾರಿಕಾ ಮದ್ಯಸಾರ: 1990ರ ತೀರ್ಪು ಅನೂರ್ಜಿತ

ಪಿಟಿಐ
Published 23 ಅಕ್ಟೋಬರ್ 2024, 15:28 IST
Last Updated 23 ಅಕ್ಟೋಬರ್ 2024, 15:28 IST
supreme-court-
supreme-court-   

ನವದೆಹಲಿ: ಕೈಗಾರಿಕಾ ಮದ್ಯಸಾರದ ಉತ್ಪಾದನೆ, ತಯಾರಿಕೆ ಮತ್ತು ಪೂರೈಕೆ ಮೇಲಿನ ನಿಯಂತ್ರಣ ಅಧಿಕಾರವು ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ.

ಸಂವಿಧಾನದ ಏಳನೆಯ ಪರಿಚ್ಛೇದದ ಅಡಿಯಲ್ಲಿ ಬರುವ ರಾಜ್ಯಗಳ ಪಟ್ಟಿಯಲ್ಲಿನ ಎಂಟನೆಯ ಅಂಶದಲ್ಲಿ ಉಲ್ಲೇಖವಾಗಿರುವ ‘ಮತ್ತುಬರಿಸುವ ಮದ್ಯ’ ಎಂಬ ಪದಗಳು ಕೈಗಾರಿಕಾ ಮದ್ಯಸಾರವನ್ನೂ ಒಳಗೊಳ್ಳುತ್ತವೆ ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಬಹುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ನಿಯಂತ್ರಣ ಅಧಿಕಾರವು ರಾಜ್ಯಗಳಿಗೆ ಇದೆ ಎಂಬ ತೀರ್ಪನ್ನು ಎಂಟು ನ್ಯಾಯಮೂರ್ತಿಗಳು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಬಹುಮತದ ತೀರ್ಪು ಬರೆದಿದ್ದಾರೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ. ಕೈಗಾರಿಕಾ ಮದ್ಯಸಾರವನ್ನು ಕಾನೂನಿನ ಮೂಲಕ ನಿಯಂತ್ರಣಕ್ಕೆ ಒಳಪಡಿಸುವ ಅಧಿಕಾರವು ರಾಜ್ಯಗಳಿಗೆ ಇಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.

ADVERTISEMENT

ಸಿಂಥೆಟಿಕ್ಸ್ ಆ್ಯಂಡ್‌ ಕೆಮಿಕಲ್ಸ್ ಲಿಮಿಟೆಡ್ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು, ಕೈಗಾರಿಕಾ ಮದ್ಯಸಾರದ ಉತ್ಪಾದನೆಯ ವಿಚಾರದಲ್ಲಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಇದೆ ಎಂದು ಹೇಳಿತ್ತು. ಈಗ ಒಂಬತ್ತು ನ್ಯಾಯಮೂರ್ತಿಗಳ ಪೀಠವು 1990ರ ತೀರ್ಪನ್ನು ಅನೂರ್ಜಿತಗೊಳಿಸಿದೆ.

ಕೈಗಾರಿಕಾ ಮದ್ಯಸಾರವು ಮನುಷ್ಯರು ಸೇವಿಸಲು ಯೋಗ್ಯವಲ್ಲ.

ಮತ್ತುಬರಿಸುವ ಮದ್ಯ ಉದ್ಯಮದ ಮೇಲೆ ನಿಯಂತ್ರಣ ಸಾಧಿಸುವ ಕಾನೂನನ್ನು ರಚಿಸುವ ಅಧಿಕಾರವು ಸಂಸತ್ತಿಗೆ ಇಲ್ಲ ಎಂದು ಬಹುಮತದ ತೀರ್ಪಿನಲ್ಲಿ ಹೇಳಲಾಗಿದೆ. 

1990ರಲ್ಲಿ ಏಳು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಪ್ರಶ್ನಿಸಿದ್ದವು. ಅಲ್ಲದೆ, ಕೈಗಾರಿಕಾ ಮದ್ಯಸಾರದ ಮೇಲೆ ತನಗೆ ಮಾತ್ರ ನಿಯಂತ್ರಣ ಅಧಿಕಾರ ಇದೆ ಎಂದು ಕೇಂದ್ರ ಸರ್ಕಾರ ತಾಳಿದ್ದ ನಿಲುವನ್ನು ಕೂಡ ಹಲವು ರಾಜ್ಯಗಳು ಪ್ರಶ್ನಿಸಿದ್ದವು.

ಕೈಗಾರಿಕಾ ಮದ್ಯಸಾರವನ್ನು ನಿಯಂತ್ರಣಕ್ಕೆ ಒಳಪಡಿಸಲು ತನಗೆ ಅಧಿಕಾರ ಇದೆ ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರವು, ಯಾವುದೇ ಕೈಗಾರಿಕೆಯ ಮೇಲೆ ತನಗೆ ಸಂಪೂರ್ಣ ನಿಯಂತ್ರಣ ನೀಡಲು ಸಂವಿಧಾನ ರೂಪಿಸಿದವರು ಉದ್ದೇಶಿಸಿದ್ದರು ಎಂದು ಹೇಳಿತ್ತು. ಕೈಗಾರಿಕಾ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ–1951ನ್ನು ಈ ಕಾರಣಕ್ಕಾಗಿ ‘ಸಾರ್ವಜನಿಕ ಹಿತದ ಉದ್ದೇಶದಿಂದ’ ರೂಪಿಸಲಾಗಿತ್ತು ಎಂದು ಅದು ವಾದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.