ಮುಂಬೈ: 17 ವರ್ಷದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ವಿಲಾಸಿ ಕಾರು ‘ಪೋಶೆ’ ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬಾಲಕ ಹಾಗೂ ಆತನ ತಂದೆ, ಉದ್ಯಮಿ ವಿಶಾಲ್ ಅಗರ್‌ವಾಲ್‌ಗೆ ಏಕೆ ಆದ್ಯತೆ ನೀಡಲಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ಬಾಲಕ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ಯಾವುದೇ ಆಟೊರಿಕ್ಷಾ, ಓಲಾ, ಉಬರ್ ಅಥವಾ ಲಾರಿ – ಬಸ್ ಚಾಲಕರು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿ ಯಾರಾದರೂ ಸಾವಿಗೀಡಾಗಿದ್ದರೆ, ಅಂತಹ ಚಾಲಕರನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತಿತ್ತು. ಆದರೆ, ಶ್ರೀಮಂತ ಕುಟುಂಬದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ಕಾರು ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾಗಿದ್ದಾನೆ. ಆತನಿಗೆ ಪೆನ್ನು ಕೊಟ್ಟು ‘ಪ್ರಬಂಧ’ ಬರೆಯಲು ಸೂಚಿಸಲಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಬಡವರು ಮತ್ತು ಶ್ರೀಮಂತರು ಎಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ನ್ಯಾಯವೂ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಡವರು ಮತ್ತು ಶ್ರೀಮಂತರು ಎಲ್ಲರಿಗೂ ಸಮಾನವಾದ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ನ್ಯಾಯದ ಸಮಾನತೆಗಾಗಿ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.