ನವದೆಹಲಿ: ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ 70ನೇ ಜನ್ಮದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಕುತೂಹಲಕಾರಿ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ.
ಪಂಜಾಬ್‌ನ ಜಲಂಧರ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುವ ವೇಳೆ ಪ್ರಧಾನಿಯವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸುಷ್ಮಾ ಸ್ವರಾಜ್ ಗುಜರಾತ್‌ನ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ಘಟನೆಯೊಂದನ್ನು ಅವರು ಮೆಲುಕು ಹಾಕಿದ್ದಾರೆ.
‘ಈ ಘಟನೆ ಸುಮಾರು 25 ವರ್ಷಗಳ ಹಿಂದೆ, ನಾನು ಬಿಜೆಪಿಯಲ್ಲಿ ಸಂಘಟಕನಾಗಿ ಕೆಲಸ ಮಾಡುತ್ತಿದ್ದಾಗ ನಡೆದಿದ್ದು. ಸುಷ್ಮಾ ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರವಾಸಕ್ಕೆ ಬಂದಿದ್ದರು. ಹಾಗೆ ಬಂದವರು, ನನ್ನ ಊರು ವಡ್ನಗರಕ್ಕೂ ಭೇಟಿ ನೀಡಿ, ನನ್ನ ತಾಯಿಯನ್ನು ಭೇಟಿಯಾಗಿದ್ದರು. ಆಗ ನಮ್ಮ ಕುಟುಂಬದಲ್ಲಿ ನನ್ನ ಸೋದರಳಿಯನಿಗೆ ಹೆಣ್ಣುಮಗುವೊಂದು ಜನಿಸಿತ್ತು. ಮಗುವಿಗೆ ಜ್ಯೋತಿಷಿಗಳು ಹೆಸರನ್ನೂ ಸೂಚಿಸಿದ್ದರು. ಕುಟುಂಬಸ್ಥರು ಆ ಹೆಸರನ್ನು ಒಪ್ಪಿದ್ದರು ಕೂಡ. ಆದರೆ, ಸುಷ್ಮಾ ಅವರು ಮನೆಗೆ ಬಂದು ಹೋದ ಬಳಿಕ ನನ್ನ ತಾಯಿಯು ಆ ಹೆಣ್ಣುಮಗುವಿಗೆ ಸುಷ್ಮಾ ಎಂದೇ ಹೆಸರಿಟ್ಟರು’ ಎಂದು ಮೋದಿ ನೆನಪು ಹಂಚಿಕೊಂಡಿದ್ದಾರೆ.
‘ನನ್ನ ತಾಯಿ ಹೆಚ್ಚು ವಿದ್ಯೆ ಪಡೆದುಕೊಂಡವರಲ್ಲ. ಆದರೆ ಅವರ ಆಲೋಚನೆಗಳು ಹೊಸದಾಗಿರುತ್ತವೆ. ನನ್ನ ಸೋದರಳಿಯನ ಮಗುವಿಗೆ ಹೆಸರಿಡುವ ಸಂದರ್ಭದಲ್ಲಿ ಆಕೆ ಮಾತನಾಡಿದ ರೀತಿ ನನಗೆ ಇಂದಿಗೂ ನೆನಪಿದೆ,’ ಎಂದು ಅವರು ತಾಯಿ ಹೀರಾಬೆನ್ ಅವರನ್ನೂ ಕೊಂಡಾಡಿದ್ದಾರೆ.
ಬಿಜೆಪಿಯ ನಾಯಕಿ ಸುಷ್ಮಾ ಸ್ವರಾಜ್ ಅವರು 2019, ಆಗಸ್ಟ್ 6 ರಂದು ತಮ್ಮ 67ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
‘ವಿವಿಧ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳನ್ನು ಉತ್ತಮಗೊಳಿಸುವಲ್ಲಿ ಸುಷ್ಮಾ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ವಿಶ್ವದ ಯಾವುದೇ ಭಾಗದಲ್ಲಿ ಸಂಕಷ್ಟದಲ್ಲಿ ಭಾರತೀಯರಿಗೆ ಅವರು ನೆರವಾಗುತ್ತಿದ್ದರು’ ಎಂದು ಮೋದಿ ಅವರು ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.