ADVERTISEMENT

ತಮಿಳುನಾಡು ವಿಧಾನಸಭೆ: ಸ್ಟಾಲಿನ್‌ಗೆ ವರದಿ ಒಪ್ಪಿಸಬೇಕು ಗಾಂಧಿ, ನೆಹರು!

ಪಿಟಿಐ
Published 7 ಮೇ 2021, 13:39 IST
Last Updated 7 ಮೇ 2021, 13:39 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನ್ನೈ: ಹೆಸರಿನಲ್ಲೇನಿದೆ? ತಮಿಳುನಾಡಿನಲ್ಲಿ ಇದು ರಾಜಕೀಯ ಒಲವು, ರಾಷ್ಟ್ರೀಯತೆಯ ಉತ್ಸಾಹ ಅಥವಾ ವ್ಯಕ್ತಿಯ ಸಿದ್ಧಾಂತದ ಸೂಚಕವೂ ಆಗಿರಬಹುದು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ದಕ್ಷಿಣ ತಮಿಳುನಾಡಿನಲ್ಲಿ ಅನೇಕರು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್ ಹೆಸರಿಟ್ಟಿದ್ದರು.

ಅದೇ ರೀತಿ ಗಾಂಧಿ, ನೆಹರು ಹಾಗೂ ಜವಾಹರ್‌ ಎಂಬ ಹೆಸರುಗಳನ್ನಿಡುವುದೂ ಸಾಮಾನ್ಯವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪವಿತ್ರ ಸ್ಮರಣೆಯನ್ನು ಶಾಶ್ವತಗೊಳಿಸುವ ಉದ್ದೇಶದಲ್ಲಿ ಹೀಗೆ ನಾಮಕರಣ ಮಾಡಲಾಗುತ್ತಿತ್ತು.

ಡಿಎಂಕೆಯ ಮಾಜಿ ಮುಖ್ಯಸ್ಥ ದಿ ಎಂ.ಕರುಣಾನಿಧಿ (1924–2018) ಅವರ ಪುತ್ರನಿಗೆ (1953ರ ಮಾರ್ಚ್ 1ರಂದು ಜನನ) ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್‌ ಸ್ಮರಣಾರ್ಥ (1953ರ ಮಾರ್ಚ್ 5ರಂದು ನಿಧನ) ಸ್ಟಾಲಿನ್ ಎಂದು ಹೆಸರಿಟ್ಟಿದ್ದರು.

ಸ್ಟಾಲಿನ್ ವಿದೇಶಿ ಆಡಳಿತಗಾರ ಮತ್ತು ಸರ್ವಾಧಿಕಾರಿಯಾಗಿದ್ದರೂ ಅವರ ಕಮ್ಯೂನಿಸ್ಟ್ ಸಿದ್ಧಾಂತದ ಮೇಲಿನ ಮೆಚ್ಚುಗೆಯಿಂದ ಕರುಣಾನಿಧಿ ತಮ್ಮ ಪುತ್ರನಿಗೆ ಅದೇ ಹೆಸರಿಟ್ಟಿದ್ದರು.

ಇದೀಗ ತಮಿಳುನಾಡಿನ 16ನೇ ವಿಧಾನಸಭೆಯಲ್ಲೂ ಇಬ್ಬರು ಗಾಂಧಿ, ಒಬ್ಬ ನೆಹರು ಇದ್ದಾರೆ. ಈ ಪೈಕಿ ಒಬ್ಬ ಗಾಂಧಿ ಹಾಗೂ ನೆಹರು ಸಚಿವರೂ ಆಗಿದ್ದಾರೆ. ಇವರಿಗೆ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ.

ತಮಿಳುನಾಡು ಸಂಪುಟದಲ್ಲಿ ಕೈಮಗ್ಗ–ಜವಳಿ ಸಚಿವರಾಗಿ ಆರ್.ಗಾಂಧಿ ಮತ್ತು ಪುರಸಭೆ ಆಡಳಿತ ಸಚಿವರಾಗಿ ಕೆ.ಎನ್.ನೆಹರು ಮುಖ್ಯಮಂತ್ರಿ ಸ್ಟಾಲಿನ್‌ಗೆ ವರದಿ ಒಪ್ಪಿಸಬೇಕಿದೆ!

ನೆಹರು ಅವರು ತಿರುಚಿರಾಪಳ್ಳಿ ಪಶ್ಚಿಮ ಪ್ರದೇಶದ ಡಿಎಂಕೆಯ ಪ್ರಮುಖ ನಾಯಕರಾಗಿದ್ದರೆ, ಗಾಂಧಿ ಅವರು ಉತ್ತರ ತಮಿಳುನಾಡಿನ ರಾಣಿಪೇಟ್‌ನವರು.

ಇನ್ನೊಬ್ಬರು ಗಾಂಧಿ (ಎಂ.ಆರ್.ಗಾಂಧಿ) ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ವಿಧಾನಸಭಾ ಕ್ಷೇತ್ರದವರು. ಏಪ್ರಿಲ್ 6ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.