ತಿರುವನಂತಪುರ:ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು 'ಶಿಕ್ಷಕ' ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ.
ಕಳೆದ ಹಲವು ದಶಕಗಳಿಂದಲೂ ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಪುರುಷ ಅಧ್ಯಾಪಕರನ್ನು 'ಸರ್' ಮತ್ತು ಮಹಿಳಾ ಶಿಕ್ಷಕಿಯರನ್ನು 'ಮೇಡಂ' ಅಥವಾ 'ಮ್ಯಾಮ್' ಎಂದು ಸಂಬೋಧಿಸಲಾಗುತ್ತದೆ.
ಲಿಂಗ ಭೇದವಿಲ್ಲದೆ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಜಾರಿಗೆ ತಂದ ಕೇರಳದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆಯ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
'ಪುರುಷ ಶಿಕ್ಷಕರನ್ನು 'ಸರ್' ಎಂದು ಸಂಬೋಧಿಸುವ ಅಭ್ಯಾಸವನ್ನುಕೈಬಿಡಬೇಕು ಎಂದು ನಮ್ಮ ಶಿಕ್ಷಕರಲ್ಲಿ ಒಬ್ಬರಾದ ಸಜೀವ್ ಕುಮಾರ್ ವಿ. ಸಲಹೆಯನ್ನು ಮುಂದಿರಿಸಿದರು. ಅವರು ಸರ್ಕಾರಿ ಕಚೇರಿಗಳಲ್ಲಿ ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದು ಹಾಕಲು ಅಭಿಯಾನ ಪ್ರಾರಂಭಿಸಿರುವ ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂದ ಅವರಿಂದ ಸ್ಪೂರ್ತಿ ಪಡೆದಿದ್ದಾರೆ' ಎಂದು ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಎಚ್. ತಿಳಿಸಿದ್ದಾರೆ.
14 ಕಿ.ಮೀ. ದೂರದಲ್ಲಿರುವ ಮಾತೂರು ಪಂಚಾಯಿತಿಯಲ್ಲೂ ಕಳೆದ ವರ್ಷ ಜುಲೈನಲ್ಲಿ ಅಧಿಕಾರಿಗಳನ್ನು ಲಿಂಗ ಸಮಾನತೆಯ ದೃಷ್ಟಿಕೋನದಲ್ಲಿ ಹುದ್ದೆಯ ಹೆಸರಲ್ಲಿ ಸಂಬೋಧಿಸುವ ಸಂಪ್ರದಾಯವನ್ನು ತೊಡೆದು ಹಾಕಿತ್ತು.
'ಇವೆಲ್ಲದರಿಂದ ಪ್ರೇರಣೆಗೊಂಡು ನಾವು ಕೂಡ ಲಿಂಗ ಭೇದವಿಲ್ಲದೆ ಸಂಬೋಧಿಸುವ ಪದ್ಧತಿಯನ್ನು ನಮ್ಮ ಶಾಲೆಯಲ್ಲಿಯೂ ಅಳವಡಿಸಿಕೊಳ್ಳಲು ಯೋಚಿಸಿದೆವು. ಈ ಕ್ರಮವನ್ನು ಮಕ್ಕಳ ಪೋಷಕರೂ ಸ್ವಾಗತಿಸಿದ್ದಾರೆ' ಎಂದು ತಿಳಿಸಿದ್ದಾರೆ.
'ಶಾಲೆಯಲ್ಲಿ ಅನುಸರಿಸಲಾಗುವ ಈ ಪದ್ಧತಿಯು ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆಯ ಬಗ್ಗೆ ಜಾಗೃತಿ ಮೂಡಿಸಲಿದೆ. 'ಸರ್' ಎಂಬ ಸಂಬೋಧನೆಯು ವಸಾಹತುಶಾಹಿ ಯುಗದ ಕುರುಹು ಆಗಿದ್ದು, ಅದನ್ನು ಸಮಾಜದಿಂದ ತೊಡೆದು ಹಾಕಬೇಕು' ಎಂದು ಬೋಬನ್ ಮಟ್ಟುಮಂದ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗಷ್ಟೇ ಕೇರಳದ ಶಾಲೆಯೊಂದರಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಏಕ ರೂಪದ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.