ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ರಾಜೀವ್ ರೈ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ಇಂದು ಕೇಂದ್ರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ ಹಾಗೂ ಹರಿಯಾಣದಲ್ಲಿ ಈ ದಾಳಿ ನಡೆದಿದ್ದು ರಾಜೀವ್ ಅವರಿಗೆ ಸಂಬಂಧಿಸಿದ ಬೇನಾಮಿ ಕಂಪನಿಗಳ ಬಗ್ಗೆ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ತಪಾಸಣೆ ಮುಂದುವರೆದಿದೆ. ಈ ವೇಳೆ ರಾಜೀವ್ ಅವರಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಏತನ್ಮಧ್ಯೆ ಉತ್ತರ ಪ್ರದೇಶದ ಸಮಾಜಾವಾದಿ ಪಕ್ಷದ ನಾಯಕರು ಈ ದಾಳಿಯನ್ನು ಖಂಡಿಸಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ, ಕೇಂದ್ರ ಸರ್ಕಾರ ಉನ್ನತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜೀವ್ ಅವರು ಅಕ್ರಮ ಹಣವನ್ನು ಬೇನಾಮಿ ಕಂಪನಿಗಳ ಹೆಸರಿನಲ್ಲಿ ತೊಡಗಿಸಿದ್ದಾರೆ ಎಂದು ಆರೋಪಿಸಿ ಮಾವುನಲ್ಲಿರುವ ಅವರ ಮನೆ, ಕಚೇರಿಗಳ ಮೇಲೆ ಬೆಳಿಗ್ಗೆ ದಾಳಿ ಮಾಡಿತ್ತು. ಮಧ್ಯಾಹ್ನ ಹರಿಯಾಣದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.