ಹೈದರಾಬಾದ್: ತೆಲುಗುದೇಶಂ ಪಕ್ಷದ ನಾಯಕ, ಗುಂಟೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗಲ್ಲಾ ಜಯದೇವ ಅವರ ಮನೆ ಮತ್ತು ಕಚೇರಿಗಳ ಮೇಲೆ ಮಂಗಳವಾರ ಮಧ್ಯರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಕರ್ನಾಟಕ, ಮಧ್ಯಪ್ರದೇಶದಲ್ಲಿ ಪ್ರಮುಖ ರಾಜಕಾರಣಿಗಳ ಮನೆಗಳ ಮೇಲೆ ಈಗಾಗಲೇ ದಾಳಿ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಮಂಗಳವಾರ ರಾತ್ರಿ ಗಲ್ಲಾ ಜಯದೇವ ಅವರ ಮೇಲೂ ದಾಳಿ ನಡೆದಿದೆ.. ಜಲೈನಲ್ಲಿ ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಗಲ್ಲಾ ಜಯದೇವ ಅವರಿಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ಐಟಿ ಅಧಿಕಾರಿಗಳು ಸದ್ಯ ಜಾಲಾಟ ನಡೆಸುತ್ತಿದ್ದಾರೆ.
ಮಂಗಳವಾರ ರಾತ್ರಿ ಗಲ್ಲಾ ಜಯದೇವ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದ್ದಂತೆ, ಟಿಡಿಪಿಯ ಪ್ರಮುಖ ನಾಯಕರೊಂದಿಗೆ ಅವರು ಪ್ರತಿಭಟನೆಗೆ ಕುಳಿತರು. ‘ನಮ್ಮ ಕಡೆಯ ವ್ಯಕ್ತಿಯೊಬ್ಬರು ಐಟಿ ಅಧಿಕಾರಿಗಳ ಬಳಿ ಸಿಲುಕಿಕೊಂಡಿದ್ದಾರೆ. ಅವರ ಕುರಿತು ಯಾವುದೇ ಮಾಹಿತಿಗಳೂ ಲಭ್ಯವಾಗುತ್ತಿಲ್ಲ. ನಾನೇಕೆ ಗುರಿಯಾಗುತ್ತಿದ್ದೇನೆ, ಟಿಡಿಪಿಯನ್ನೇಕೆ ಗುರಿ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ಮೇಲೆ ಪ್ರಭಾವ ಬೀರುವ ಕಾರಣಕ್ಕೆ ಮೋದಿ ಸರ್ಕಾರ ಈ ರೀತಿಯ ತಂತ್ರಗಳನ್ನು ಆಗ್ಗಿಂದಾಗೆ ನಡೆಸುತ್ತಲೇ ಇರುತ್ತದೆ. ರಾಜ್ಯವನ್ನು ತುರ್ತು ಪರಿಸ್ಥಿತಿಗೆ ತಳ್ಳುವ ಪ್ರಯತ್ನಗಳಿವು. ಅದಾಯ ತೆರಿಗೆ ಇಲಾಖೆ, ಚುನಾವಣೆ ಆಯೋಗ ಪಕ್ಷಪಾತಿಗಳಾಗಿ ಕೆಲಸ ಮಾಡುತ್ತಿವೆ,‘ ಎಂದು ಅವರು ಆರೋಪಿಸಿದರು.
ಗಲ್ಲಾ ಜಯದೇವ ಅವರು ರಾಜಕಾರಣಿಯೂ ಹೌದು, ಉದ್ಯಮಿಯೂ ಹೌದು. ಬಹುಕೋಟಿಗಳ ಒಡೆಯ ಎನಿಸಿಕೊಂಡಿರುವ ಜಯದೇವ್ ಅವರು ‘ಅಮರ ರಾಜಾ’ಸಮೂಹ ಸಂಸ್ಥೆಗಳ ಮಾಲೀಕ. 2014ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗಲೇ ಅವರು ₹680 ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದರು.
ಇತ್ತೀಚಿನ ಆದಾಯ ತೆರಿಗೆ ದಾಳಿಗಳ ಕುರಿತು ಚರ್ಚೆ ನಡೆಸಲು ಚುನಾವಣೆ ಆಯೋಗ ನಿನ್ನೆಯಷ್ಟೇ ಕಂದಾಯ ಇಲಾಖೆ ಕಾರ್ಯದರ್ಶಿ ಎಬಿ ಪಾಂಡೆ, ತೆರಿಗೆ ಇಲಾಖೆಯ ಮುಖ್ಯಸ್ಥ ಪಿ.ಸಿ ಮೂಡಿ ಅವರೊಂದಿಗೆ ಸಭೆ ನಡೆಸಿತ್ತು. ಅದಾದ ಮರುದಿನವೇ ಈ ದಾಳಿ ನಡೆದಿದೆ.
ಯಾರು ಈ ಗಲ್ಲಾ ಜಯದೇವ?
ಸದ್ಯ ಆದಾಯ ತೆರಿಗೆ ಇಲಾಖೆಯ ದಾಳಿಗೆ ಗುರಿಯಾಗಿರುವ ಗಲ್ಲಾ ಜಯದೇವ ಅವರು ಟಿಡಿಪಿಯ ಅತ್ಯಂತ ವಿಶ್ವಾಸಾರ್ಹ ಮತ್ತು ಅಷ್ಟೇ ಸಿರಿವಂತ ನಾಯಕ. ಕಳೆದ ಜುಲೈನಲ್ಲಿ ಟಿಡಿಪಿಯು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಟಿಡಿಪಿ ಆಯ್ಕೆ ಮಾಡಿಕೊಂಡಿದ್ದು ಆಗಷ್ಟೇ ಮೊದಲ ಬಾರಿಗೆ ಗುಂಟೂರಿನಿಂದ ಸಂಸತ್ ಪ್ರವೇಶಿಸಿದ್ದ ಇದೇ ಗಲ್ಲಾ ಜಯದೇವ ಅವರನ್ನು. ಗೊತ್ತುವಳಿ ಮಂಡನೆ ವೇಳೆ ನಿರಂತರ 30 ನಿಮಿಷಕ್ಕಿಂತಲೂ ಹೆಚ್ಚಿನ ಸಮಯ ಮಾತನಾಡಿದ್ದ ಗಲ್ಲಾ ಜಯದೇವ ಅವರು ರಾಷ್ಟ್ರದ ಮಾಧ್ಯಮಗಳಲ್ಲಿ ಮಿಂಚಿದ್ದರು.ಜಯದೇವ್ ಚಿಕ್ಕಂದಿನಲ್ಲೇ ಪೋಷಕರೊಂದಿಗೆ ಅಮೆರಿಕಕ್ಕೆ ತೆರಳಿ, ಅಲ್ಲೇ 22 ವರ್ಷ ನೆಲೆಸಿ ಶಿಕ್ಷಣವನ್ನು ಪೂರೈಸಿದವರು. ಜಯದೇವಾ ಅವರ ಪತ್ನಿ ಪದ್ಮಾವತಿ. ಇವರು ತೆಲುಗಿನ ಮೇರು ನಟ ಕೃಷ್ಣ ಅವರ ಪುತ್ರಿ. ನಟ ಮಹೇಶ್ ಬಾಬು ಅವರ ಸೋದರಿ.
ಸಂಸತ್ತಿನ ಶೇ. 84ರಷ್ಟು ಕಲಾಪಗಳಿಗೆ ಹಾಜರಾಗಿರುವ ಜಯದೇವ್ ಗಲ್ಲಾ ಅವರು ಉತ್ತಮ ಸಂಸದೀಯಪಟು ಎಂದೂ ಕರೆಸಿಕೊಂಡಿದ್ದಾರೆ. ಜಯದೇವ್ ಗಲ್ಲಾ ತಾಯಿ ಅರುಣಾ ಕುಮಾರಿ ಗಲ್ಲಾ ಆಂಧ್ರದ ಚಂದ್ರಗಿರಿ ಕ್ಷೇತ್ರದ ಶಾಸಕಿಯಾಗಿದ್ದರು. ಅಲ್ಲದೆ, ಆಂಧಪ್ರದೇಶ ಸರ್ಕಾರದಲ್ಲಿ ಹಲವು ವರ್ಷ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.